ನವದೆಹಲಿ, ಆ.2– ಭಾರೀ ಚರ್ಚೆಯಿಂದ ಕುತೂಹಲ ಕೆರಳಿಸಿದ್ದ ಉಗ್ರ ನಿಗ್ರಹ ತಿದ್ದುಪಡಿ ವಿಧೇಯಕ ಇಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.
ಪರ-ವಿರೋಧ ಅಭಿಪ್ರಾಯಗಳ ಚರ್ಚೆ ನಡುವೆ ಈ ವಿಧೇಯಕವನ್ನು ಮತಕ್ಕೆ ಹಾಕಿದಾಗ ಪ್ರತಿಪಕ್ಷಗಳಿಗೆ ಸೋಲುಂಟಾಯಿತು.
ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಲು ಉದ್ದೇಶಿಸಿರುವ ಕಾನೂನು ಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರತಿಪಕ್ಷಗಳಿಗೆ ರಾಜ್ಯಸಭೆಯಲ್ಲಿಂದು ತೀವ್ರ ಹಿನ್ನಡೆಯಾಗಿದೆ.
ಈ ತಿದ್ದುಪಡಿ ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂಬ ಪ್ರತಿಪಕ್ಷಗಳ ನಿರ್ಣಯವನ್ನು ರಾಜ್ಯಸಭೆ 104/85ಮತಗಳಿಂದ ತಿರಸ್ಕರಿಸಿದೆ.
ಈ ಕಾಯ್ದೆ ಕುರಿತು ಸಂಸತ್ತಿನ ಮೇಲ್ಮನೆಯಲ್ಲಿ ಇಂದು ಕೂಡ ಮುಂದುವರಿದ ಚರ್ಚೆಯಲ್ಲಿ ಎಡಪಕ್ಷಗಳೂ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಕಾಯ್ದೆಯ ಉದ್ದೇಶಿತ ತಿದ್ದುಪಡಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದರಿಂದ ದೇಶದಲ್ಲಿ ಮುಗ್ದರ ವಿರುದ್ಧ ವ್ಯಾಪಕ ಶೋಷಣೆ ಮತ್ತು ದೌರ್ಜನ್ಯಗಳು ನಡೆಯುತ್ತವೆ ಎಂದು ಎಡಪಕ್ಷಗಳ ಸದಸ್ಯರು ಆರೋಪಿಸಿದರು.
ನಂತರ ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಷಾ ಈ ತಿದ್ದುಪಡಿ ವಿಧೇಯಕವನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡಿರಲಿಲ್ಲ. ಅಲ್ಲದೆ, ಮಾನವ ಹಕ್ಕುಗಳ ಉಲ್ಲಂಘನೆಗೆ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ನೆರವು ನೀಡುವವರ ವಿರುದ್ಧ ಉಗ್ರಕ್ರಮ ಕೈಗೊಳ್ಳುವ ಉದ್ದೇಶದಿಂದ ಮಾತ್ರ ಈ ತಿದ್ದುಪಡಿ ಮಸೂದೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.
ನಂತರ ಈ ತಿದ್ದುಪಡಿ ವಿಧೇಯಕವನ್ನು ಆಯ್ಕೆ ಸಮಿತಿ ನಿರ್ಧಾರಕ್ಕೆ ಒಪ್ಪಿಸುವಂತೆ ಪ್ರತಿಪಕ್ಷಗಳ ಗೊತ್ತುವಳಿಯನ್ನು ಮತಕ್ಕೆ ಹಾಕಿದಾಗ ಅದರ ವಿರುದ್ಧವಾಗಿ 104 ಮತಗಳು ಮತ್ತು ಪರವಾಗಿ 85 ಮತಗಳು ಚಲಾವಣೆಯಾದವು. ಈ ಮೂಲಕ ಕಾನೂನು ಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ ತಿದ್ದುಪಡಿಗೆ ಮೇಲ್ಮನೆಯಲ್ಲಿ ಅಂಗೀಕಾರವಾಗಿದೆ.