ಬೆಂಗಳೂರು,ಆ.3- ಲೋಕಸಭೆ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಚಿತ್ರನಟ ದಿ.ಅಂಬರೀಶ್ ಪತ್ನಿ ಸುಮಲತ ಸ್ಪರ್ಧಿಯಿಂದ ರಾಷ್ಟ್ರದ ಗಮನ ಸೆಳೆದಿದ್ದ ಸಕ್ಕರೆ ನಾಡು ಮಂಡ್ಯ ಮತ್ತೊಮ್ಮೆ ಜಿದ್ದಾಜಿದ್ದಿನ ಕುರುಕ್ಷೇತ್ರವಾಗುವ ಲಕ್ಷಣಗಳಿವೆ.
ಕಾರಣ ಯಾವುದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕವನ್ನು ಆಯೋಗ ಘೋಷಣೆ ಮಾಡಲಿದೆ.
ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ಈ ಕ್ಷೇತ್ರದಿಂದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದೆ.
ಒಂದು ವೇಳೆ ನಿಖಿಲ್ ಕಣಕ್ಕಿಳಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚಿಂತನ-ಮಂಥನ ಆರಂಭವಾಗಿದೆ.
ಜೆಡಿಎಸ್ನ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ದಳಪತಿಗಳ ಕೋಟೆಯನ್ನು ಬೇಧಿಸಿ ಕಮಲ ಅರಳಿಸುವ ಲೆಕ್ಕಾಚಾರ ಯಡಿಯೂರಪ್ಪನವರದ್ದು. ಹೀಗಾಗಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ತಮ್ಮ ಹುಟ್ಟೂರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಗೆ ತೆರಳಿ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಅಲ್ಲದೆ ಮೇಲುಕೋಟೆಗೆ ತೆರಳಿ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದಲ್ಲದೆ ಅನ್ನಸಂತರ್ಪ ಕೇಂದ್ರ ನಿರ್ಮಿಸಲು ಎರಡು ಕೋಟಿ ಅನುದಾನ ನೀಡುವ ಘೋಷಣೆಯನ್ನು ಮಾಡಿದ್ದರು.
ಹೇಳಿಕೇಳಿ ಮಂಡ್ಯ ಜೆಡಿಎಸ್ನ ಭದ್ರಕೋಟೆಯಾಗಿತ್ತು. ಆದರೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತ ಅಂಬರೀಶ್ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ದಳಪತಿಗಳ ಕೋಟೆಯನ್ನೇ ಛಿದ್ರ ಮಾಡಿದ್ದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾವೇರಿ ನದಿಯಲ್ಲೂ ಸಾಕಷ್ಟು ನೀರು ಹರಿದು ಹೋಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗುವ ಲಕ್ಷಣಗಳು ಮರೀಚಿಕೆಯಾಗಿದೆ. ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿರುವ ಬಿಜೆಪಿ ಶತ್ರುವಿನ ಶತ್ರುಕೋಟೆಯಲ್ಲೇ ಕಮಲ ಅರಳಿಸುವ ಲೆಕ್ಕಾಚಾರದಲ್ಲಿದೆ.
ಮಂಡ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಸಂಘಟನೆಯೂ ಇಲ್ಲ. ಈವರೆಗೂ ಅಲ್ಲಿ ಗ್ರಾಮಪಂಚಾಯ್ತಿ ಚುನಾವಣೆಯಲ್ಲೂ ಬಿಜೆಪಿ ಗೆದ್ದಿಲ್ಲ. 2008ರಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಗೆಲ್ಲುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ನಾರಾಯಣಸ್ವಾಮಿ ಅನರ್ಹತೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.
ಈಗಾಗಲೇ ಜಿಲ್ಲಾ ಮುಖಂಡರು ಹಾಗೂ ಸ್ಥಳೀಯ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಯಡಿಯೂರಪ್ಪ ಉಪಸಮರಕ್ಕೆ ಬೇಕಾದ ವೇದಿಕೆಯನ್ನು ಸಿದ್ದಪಡಿಸುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ವಿಜಯೇಂದ್ರ ಅವರಿಗೆ ತಾವು ಹುಟ್ಟಿದ ತಾಲ್ಲೂಕಿನಲ್ಲೇ ರಾಜಕೀಯ ಭವಿಷ್ಯ ರೂಪಿಸಲು ಬಿಎಸ್ವೈ ಮುಂದಾಗಿದ್ದಾರೆ.
2018ರ ಚುನಾವಣೆಯಲ್ಲಿ ವಿಜಯೇಂದ್ರ ಮೈಸೂರು ಜಿಲ್ಲೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಯಿತ್ತು. ಅಂದು ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ವಿರುದ್ಧ ಕಣಕ್ಕಿಳಿಯಲು ಸಿದ್ದತೆಗಳನ್ನು ನಡೆಸಲಾಗಿತ್ತು. ಕೊನೆ ಕ್ಷಣದಲ್ಲಿ ವರಿಷ್ಠರ ಸೂಚನೆಯಂತೆ ವಿಜಯೇಂದ್ರ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದರೆ ವಿಜಯೇಂದ್ರ ಕೂಡ ಅಖಾಡಕ್ಕೆ ಧುಮುಕಲಿದ್ದಾರೆ. ಹಾಲಿ ಮತ್ತು ಮಾಜಿ ಸಿಎಂಗಳ ಹಣಾಹಣಿಗೆ ಕೆ.ಆರ್.ಪೇಟೆ ಸಾಕ್ಷಿಯಾಗಲಿದೆ.