ರಾಯ್ಪುರ,ಆ.3– ಛತ್ತೀಸ್ಗಢದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ವ್ಯವಸ್ಥಿತ ಸಂಚು ರೂಪಿಸಿದ್ದ ಏಳು ನಕ್ಸಲರು ಇಂದು ಮುಂಜಾನೆ ಯೋಧರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ.
ಮಾವೋವಾದಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಭದ್ರತಾ ಪಡೆಗಳು ಇಂದು ಭರ್ಜರಿ ಬೇಟೆ ಮೂಲಕ ನಕ್ಸಲರಿಗೆ ಮತ್ತೊಂದು ಭಾರೀ ಹೊಡೆತ ನೀಡಿದ್ದಾರೆ.
ಛತ್ತೀಸ್ಗಢದ ರಾಜಾನಂದ್ಗಾಂವ್ ಜಿಲ್ಲೆಯ ಸೀತಾಗೋತ ಗ್ರಾಮದ ಅರಣ್ಯ ಬಳಿ ಇಂದು ಜಿಲ್ಲಾ ಮೀಸಲು ದಳ(ಡಿಆರ್ಜಿ) ಯೋಧರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಏಳು ಮಾವೋವಾದಿಗಳು ಹತರಾಗಿದ್ದಾರೆ.
ಮೃತ ನಕ್ಸಲರಿಂದ ಎಕೆ-47 ರೈಫೆಲ್ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸ್ ಮಹಾನಿರ್ದೇಶಕ(ನಕ್ಸಲ್ ನಿಗ್ರಹ ಕಾರ್ಯಾಚರಣೆ) ಪಿ.ಸುಂದರ್ ರಾಜ್ ತಿಳಿಸಿದ್ದಾರೆ.
ನಕ್ಸಲ್ ಉಪಟಳವಿರುವ ಛತ್ತೀಸ್ಗಢ, ಜಾರ್ಖಂಡ್, ಬಿಹಾರ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಹುತಾತ್ಮ ಮಾವೋವಾದಿಗಳ ಸಪ್ತಾಹ ಆಚರಿಸಲಾಗುತ್ತಿದ್ದು, ಯೋಧರ ಮೇಲೆ ನಕ್ಸಲೀಯರು ದಾಳಿ ನಡೆಸುವ ಸುಳಿವಿನ ಮೇರೆಗೆ ಕಟ್ಟೆಚ್ಚರ ವಹಿಸಲಾಗಿತ್ತು.
ರಾಜಾನಂದ್ಗಾಂವ್ನ ಭಾಗ್ನದಿ ಪೊಲೀಸ್ಠಾಣೆ ವ್ಯಾಪ್ತಿಯ ಸೀತಾಗೋತ ಗ್ರಾಮದ ದಟ್ಟ ಅಡವಿಯ ಬಳಿ ವಿಧ್ವಂಸಕ ಕೃತ್ಯಕ್ಕಾಗಿ ನಕ್ಸಲರ ತಂಡವೊಂದು ಕುತಂತ್ರ ರೂಪಿಸಿದೆ ಎಂಬ ಖಚಿತ ಮಾಹಿತಿ ಡಿಆರ್ಜಿ ಯೋಧರಿಗೆ ಲಭಿಸಿತ್ತು.
ನಿನ್ನೆ ತಡರಾತ್ರಿಯಿಂದಲೇ ಯೋಧರು ಆ ಪ್ರದೇಶವನ್ನು ಸುತ್ತುವರೆದು ನಕ್ಸಲೀಯರಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದರು. ಇಂದು ಮುಂಜಾನೆ 6 ಗಂಟೆ ಸುಮಾರಿನಲ್ಲಿ ಯೋಧರು ತಮ್ಮ ಬಳಿ ಬರುತ್ತಿರುವುದನ್ನು ಕಂಡು ಮರೆಯಲ್ಲಿ ಅಡಗಿದ್ದ ಮಾವೋವಾದಿಗಳು ಗುಂಡು ಹಾರಿಸಿದರು.
ಯೋಧರು ಸಹ ಪ್ರತಿಯಾಗಿ ಗುಂಡು ಹಾರಿಸಿದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ಈ ಎನ್ಕೌಂಟರ್ನಲ್ಲಿ ಏಳು ನಕ್ಸಲರು ಹತರಾದರು. ಮೃತರ ಬಳಿ ಇದ್ದ ಅಪಾರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ನಕ್ಸಲರಿಗೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಂದರ್ ರಾಜ್ ತಿಳಿಸಿದ್ದಾರೆ.
ಗುಂಡಿನ ಕಾಳಗದ ವೇಳೆ ಇನ್ನೂ ಕೆಲವು ನಕ್ಸಲೀಯರಿಗೆ ಗಾಯಾಗಳಾಗಿರುವ ಸಾಧ್ಯತೆಗಳಿದ್ದು, ಗುಂಡೇಟಿಗೆ ಒಳಗಾಗಿರುವ ಮಾವೋವಾದಿಗಳು ಪರಾರಿಯಾಗಿದ್ದಾರೆ. ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ರಾಜ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಛತ್ತೀಸ್ಗಢದ ನಕ್ಸಲ್ ಪೀಡಿತ ಜಿಲ್ಲೆಗಳಾದ ಸುಕ್ಮಾ, ಬಸ್ತರ್, ಬಿಜಾಪುರ್ ಸೇರಿದಂತೆ ವಿವಿಧೆಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ನಕ್ಸಲ್ ನಿಗ್ರಹ ಪಡೆ ಮಹಿಳೆಯರು ಸೇರಿದಂತೆ ಕೆಲವು ಬಂಡುಕೋರರನ್ನು ಹತ್ಯೆ ಮಾಡಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಭದ್ರತಾ ಪಡೆಗಳು, ಯೋಧರು ಮತ್ತು ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರನ್ನು ಗುರಿಯಾಗಿಟ್ಟುಕೊಂಡು ನಕ್ಸಲರು ನಡೆಸುತ್ತಿರುವ ವಿಧ್ವಂಸಕ ಕೃತ್ಯಗಳು ಇತ್ತೀಚಿನ ದಿನಗಳಲ್ಲಿ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿದೆ.
ನೆಲಬಾಂಬ್ ಸ್ಪೋಟಗಳ ಮೂಲಕ ಯೋಧರನ್ನು ಕೊಲ್ಲುತ್ತಿರುವ ನಕ್ಸಲರು ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಗುತ್ತಿಗೆದಾರರು ಮತ್ತು ಉದ್ಯಮಿಗಳನ್ನು ಅಪಹರಿಸಿ ಹತ್ಯೆ ಮಾಡುತ್ತಿದ್ದಾರೆ. ಅಲ್ಲದೆ ರಸ್ತೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಕಂಪನಿಗಳ ವಾಹನಗಳಿಗೆ ಅಗ್ನಿಸ್ಪರ್ಶ ಮಾಡಿ ಧ್ವಂಸಗೊಳಿಸುತ್ತಿದ್ದಾರೆ.
ಈ ಎಲ್ಲ ಕಾರಣಗಳಿಂದ ಛತ್ತೀಸ್ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ.