ಬೆಂಗಳೂರು, ಆ.3- ನಗರದಲ್ಲಿ ಸಂಪೂರ್ಣವಾಗಿ ಪ್ಲ್ಯಾಸ್ಟಿಕ್ ನಿಷೇಧ ಮಾಡಬೇಕೆಂದು ಬಿಬಿಎಂಪಿ ಪಣತೊಟ್ಟಿದ್ದು, ಮೇಯರ್ ಗಂಗಾಂಬಿಕೆಯವರೇ ಇದನ್ನು ಉಲ್ಲಂಘಿಸಿ ಈಗ ದಂಡ ಕಟ್ಟಲು ಒಪ್ಪಿದ್ದಾರೆ.
ಆಗಿದಿಷ್ಟೆ…… ಜುಲೈ 30ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಲು ಮೇಯರ್ ಗಂಗಾಂಬಿಕೆ ಹೋಗಿದ್ದರು.
ಮುಖ್ಯಮಂತ್ರಿಗಳಿಗೆ ಶುಭ ಕೋರಲು ಕೊಂಡೊಯ್ದಿದ್ದ ಡ್ರೈಫ್ರೂಟ್ಸ್ ಬುಟ್ಟಿಯ ಮೇಲ್ಪದರವನ್ನು ಪ್ಲ್ಯಾಸ್ಟಿಕ್ ಕವರ್‍ನಿಂದ ಮುಚ್ಚಲಾಗಿತ್ತು. ಮೇಯರ್ ಪ್ಲ್ಯಾಸ್ಟಿಕ್ ಬಳಕೆ ಮಾಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನು ಗಮನಿಸಿದ ಗಂಗಾಂಬಿಕೆ ತಕ್ಷಣ ಪ್ಲ್ಯಾಸ್ಟಿಕ್ ಬಳಸಿದ್ದಕ್ಕೆ ಕ್ಷಮೆಯಾಚಿಸಿ ತಾವೇ ಖುದ್ದಾಗಿ ಬಿಬಿಎಂಪಿ ಆರೋಗ್ಯ ಇಲಾಖೆಗೆ ತೆರಳಿ 500ರೂ.ದಂಡ ಕಟ್ಟುವುದಾಗಿ ತಿಳಿಸಿದ್ದಾರೆ.