ಮುಂಬೈ, ಆ.2– ಲವ್ ಈಸ್ ಬ್ಲೈಂಡ್ ಈ ಪ್ರಸಿದ್ಧ ಆಂಗ್ಲ ಗಾದೆ ಮಾತು ಎಷ್ಟೋ ಸಂದರ್ಭಗಳಲ್ಲಿ ನಿಜವಾಗಿದೆ. ಪ್ರೀತಿಗೆ ವಯಸ್ಸು ಮತ್ತು ಅಂತಸ್ತುಗಳ ಭೇದ-ಭಾವ ಇಲ್ಲ.
ಮಾಜಿ ಭುವನಸುಂದರಿ ಮತ್ತು ಖ್ಯಾತ ಅಭಿನೇತ್ರಿ ಸುಷ್ಮಿತಾ ಸೇನ್ ಮತ್ತು ರೂಪದರ್ಶಿ ರೋಹಮಂ ಷಾಲ್ ಅವರ ವಿವಾಹದ ಸುದ್ದಿ ಈಗ ಬಿ ಟೌನ್ ತುಂಬೆಲ್ಲ ಹಬ್ಬಿದೆ.
ಇಲ್ಲಿ ಗಮನಾರ್ಹ ಸಂಗತಿ ಎಂದರೆ 42 ವರ್ಷದ ಸುಷ್ ತನಗಿಂತಲೂ 14 ವರ್ಷಗಳಷ್ಟು ಕಿರಿಯನಾದ ಸ್ಪುರದ್ರೂಪಿ ಶಾಲ್ ಜತೆ ವಿವಾಹವಾಗಲು ಸಜ್ಜಾಗಿದ್ದಾರೆ ಎಂಬುದು ಈಗಿನ ತಾಜಾಸುದ್ದಿ.
ರೂಪದರ್ಶಿ ಮತ್ತು ಫಿಟ್ನೆಸ್ ಎಕ್ಸ್ಪರ್ಟ್ ಆದ ಶಾಲ್ ಅನೇಕ ಜಾಹಿರಾತುಗಳಲ್ಲೂ ಮಿಂಚಿರುವ ಮೋಹಕ ಯುವಕ.
ಸುಷ್ ಕುಟುಂಬಕ್ಕೆ ಈ ಹಿಂದೆ ಶಾಲ್ ಪರಿಚಿತನಾಗಿದ್ದ. ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆಯಿತು. ಗಾಢ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಯಿತು. ಈ ಪ್ರೀತಿ ಈಗ ವಿವಾಹ ಬಂಧನದ ಹಂತ ತಲುಪಿದೆ.
ಇತ್ತೀಚಿನ ದಿನಗಳಲ್ಲಿ ಇವರಿಬ್ಬರು ಅನೇಕ ಸಂದರ್ಭಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಇವರಿಬ್ಬರ ಓಡಾಟ-ಒಡನಾಟ ಅತಿ ಎನಿಸುವಷ್ಟು ಗಮನ ಸೆಳೆದಿತ್ತು.
ಸುಷ್ ಜತೆ ದೇಶ-ವಿದೇಶಗಳಲ್ಲಿ ಒಟ್ಟಿಗೇ ಪ್ರವಾಸ ಕೈಗೊಂಡಿದ್ದ ಶಾಲ್ ಮಾಜಿ ಭುವನಸುಂದರಿಯ ಕುಟುಂಬಕ್ಕೆ ಪರಮಾಪ್ತನಾಗಿದ್ದಾನೆ. ಇವರಿಬ್ಬರು ಒಟ್ಟಿಗೆ ವ್ಯಾಯಾಮ ಮಾಡುವ ಮತ್ತು ಪೋಟೋಗಳಲ್ಲಿ ಕಾಣಿಸಿಕೊಂಡ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವದಂತಿಯ ಬೆಲೂನ್ ಉಬ್ಬಿಹೋಗಿತ್ತು. ಈಗ ಇವರಿಬ್ಬರು ಅತಿ ಶೀಘ್ರದಲ್ಲೇ ವಿವಾಹ ಬಂಧನಕ್ಕೆ ಒಳಗಾಗುವ ಮೂಲಕ ಬಾಲಿವುಡ್ನಲ್ಲಿ ಮತ್ತೊಂದು ವೆಡ್ಡಿಂಗ್ ಬೆಲ್ ಮೊಳಗಲಿದೆ.