ಶ್ರೀನಗರ, ಆ.2– ಭಾರತೀಯ ಸೇನಾ ಪಡೆಗಳ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಪಾಕಿಸ್ತಾನದ ಜೈಷ್-ಎ-ಮಹಮದ್ (ಜೆಇಎ) ಭಯೋತ್ಪಾದನೆ ಸಂಘಟನೆಯಿಂದ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಆತಂಕ ಎದುರಾಗಿದೆ.
ಜೈಷ್‍ನ ಐವರು ಕುಖ್ಯಾತ ಉಗ್ರರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದು, ಭದ್ರತಾ ಪಡೆಗಳು ಮತ್ತು ಯೋಧರ ಮೇಲೆ ಭಾರೀ ವಿಧ್ವಂಸಕ ದಾಳಿಗೆ ಸಜ್ಜಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ. ಈ ಹಿನ್ನಲೆಯಲ್ಲಿ ಕಣಿವೆ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ವ್ಯಾಪಕ ಭದ್ರತೆ ಏರ್ಪಾಡು ಮಾಡಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಮಾರ್ಗವಾಗಿ ಐವರು ಜೈಷ್ ಉಗ್ರರು ಕಾಶ್ಮೀರ ಕಣಿವೆಗೆ ನುಸುಳಿಸಿದ್ದಾರೆ ಎಂಬ ಗುಪ್ತಚರ ವರದಿಗಳು ತಿಳಿಸಿವೆ.
ಈ ಐವರು ಉಗ್ರರು ಉತ್ತಮ ರೀತಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ತರಬೇತಿ ಪಡೆದಿದ್ದು, ಭದ್ರತಾಪಡೆಗಳೇ ಇವರ ಗುರಿಯಾಗಿದೆ ಎಂದು ಮೂಲಗಳು ಹೇಳಿವೆ.
ಕಾಶ್ಮೀರದಲ್ಲಿರುವ ಸೇನಾ ನೆಲೆಗಳು, ಯೋಧರ ಶಿಬಿರಗಳು ಮತ್ತು ಶಸ್ತಾಸ್ತ್ರ ಸಂಗ್ರಹಗಾರಗಳು ಪಾಕ್ ಉಗ್ರರ ಟಾರ್ಗೆಟ್ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಸೇನೆ ಮತ್ತು ವಾಯುಪಡೆಗಳನ್ನು ಕಟ್ಟೆಚ್ಚರದಿಂದ ಇರಿಸಲಾಗಿದೆ. ಜೈಷ್ ಉಗ್ರರ ಸಂಭವನೀಯ ದಾಳಿಗಳನ್ನು ಎದುರಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಸೇನಾಪಡೆಗಳನ್ನು ಸಹ ಭದ್ರತೆಗೆ ನಿಯೋಜಿಸಲಾಗಿದೆ.
ನಿನ್ನೆ ಸಂಜೆಯಿಂದ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ಕಾಶ್ಮೀರ ಕಣಿವೆಯಲ್ಲಿ ಹಾರಾಡುತ್ತಾ ಗಸ್ತು ಕಾರ್ಯ ನಡೆಸುತ್ತಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ 28 ಕಂಪನಿಗಳ ಭದ್ರತಾ ಪಡೆಯನ್ನು ಕೇಂದ್ರ ಸರ್ಕಾರ ನಿಯೋಜಿಸಿದೆ. ಸೂಕ್ಷ್ಮ ಸ್ಥಳದಲ್ಲಿ ಸಿಆರ್‍ಪಿಎಫ್ ಸೇರಿದಂತೆ ಅರೆ ಸೇನಾಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಉಗ್ರರ ದಾಳಿ ಸಾಧ್ಯತೆ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವ್ಯಾಪಕ ಭದ್ರತೆ ಒದಗಿಸಲಾಗಿದೆ.