ಸಂಸದ ಅಜಂಖಾನ್ ವಿರುದ್ಧ ಇಸಿಐಆರ್ ದಾಖಲಿಸಿದ ಇಡಿ

ಲಖನೌ, ಆ.2– ವಿವಾದತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆಗಳ ಮೂಲಕ ಬಿಜೆಪಿ ಸಂಸದರ ಕೆಂಗಣ್ಣಿಗೆ ಗುರಿಯಾಗಿದ್ದ ಸಮಾಜವಾದಿ ಪಕ್ಷ ಮುಖಂಡ ಮತ್ತು ಸಂಸದ ಅಜಂಖಾನ್ ವಿರುದ್ಧ ಅಕ್ರಮ ಭೂ ಸ್ವಾಧೀನ ಮತ್ತು ಹಣ ದುರ್ಬಳಕೆ ಪ್ರಕರಣಗಳು ದಾಖಲಾಗಿವೆ.

ಉತ್ತರ ಪ್ರದೇಶದಲ್ಲಿ ಅನೇಕ ಅಕ್ರಮ ಭೂ ಸ್ವಾಧೀನ, ನೋಂದಣಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಪಿ ಸಂಸದ ಅಜಂಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.

ಅಜಂಖಾನ್ ವಿರುದ್ಧದ ಕನಿಷ್ಠ 26 ಪೊಲೀಸ್ಎಫ್‍ಐಆರ್‍ಗಳನ್ನು ಸ್ವ-ಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ, ಜಾರಿ ಪ್ರಕರಣ ್ನ ಮಾಹಿತಿ ವರದಿ (ಇಸಿಐಆರ್ ) ದಾಖಲಿಸಿದೆ. ಇದು ಪೊಲೀಸ್ಎಫ್‍ಐಆರ್‍ಗೆ ಸಮಾನವಾದದ್ದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಭೂಸ್ವಾಧೀನ, ಹಸ್ತಾಂತರ, ನೋಂದಣಿ ಆರೋಪ ಕೇಳಿಬಂದಿರುವ ಅಜಂಖಾನ್ ಹಾಗೂ ಮತ್ತಿತರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‍ನಡಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಅಜಂಖಾನ್ ಹಾಗೂ ಇತರ ವಿರುದ್ಧದ ಆಸ್ತಿಪಾಸ್ತಿ ಸಂಬಂಧ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು, ಒಂದು ವೇಳೆ ಅಕ್ರಮ ಎಂಬುದು ಸಾಬೀತಾದರೆ ಅನಧಿಕೃತ ಹಣ ವರ್ಗಾವಣೆ ಕಾಯ್ದೆಯಡಿ ಅವರ ಆಸ್ತಿಪಾಸ್ತಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಮೊಹಮ್ಮದ್ ಆಲಿ ಜವಹರ್ ವಿವಿಯ ಸಂಸ್ಥಾಪಕ ಹಾಗೂ ಕುಲಪತಿ ಆಗಿರುವ ಉತ್ತರ ಪ್ರದೇಶದ ಮಾಜಿ ಸಚಿವರ ವಿರುದ್ಧ ಬಲವಂತದ ಭೂ ಸ್ವಾಧೀನ ಆರೋಪಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ.

ಅಜಂಖಾನ್ ಹಾಗೂ ವಿವಿಗೆ ಕೆಟ್ಟ ಹೆಸರು ತರುವಂತಹ ನಿಟ್ಟಿನಲ್ಲಿ ರಾಮ್‍ಪುರ ಜಿಲ್ಲಾಧಿಕಾರಿಯಿಂದ ಕುತಂತ್ರ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಭೂ ಮಾಪಿಯಾಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಇತ್ತೀಚಿಗೆ ಬಿಡುಗಡೆ ಮಾಡಿರುವ ಆನ್‍ಲೈನ್ ಪಟ್ಟಿಯಲ್ಲಿ ರಾಮ್ ಪುರದ ಸಂಸದರ ಹೆಸರನ್ನು ಕೂಡಾ ಹಾಕಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ