ಬೆಂಗಳೂರು,ಆ.3- ಮೌಲ್ಯಗಳ ಪ್ರತಿಪಾದಕರಂತೆ ಮಾತನಾಡುವ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ಕುಮಾರ್ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅನೈತಿಕ ಮಾರ್ಗ ಅನುಸರಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಮಾಜಿ ಶಾಸಕ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿರಲಿಲ್ಲ. ನಮ್ಮ ಮನವಿಯನ್ನು ಆಲಿಸದೆ ಅನರ್ಹಗೊಳಿಸಲಾಗಿದೆ. ಮೌಲ್ಯಗಳ ಬಗ್ಗೆ ಪ್ರತಿಪಾದಕರಂತೆ ನಟನೆ ಮಾಡುವ ರಮೇಶ್ಕುಮಾರ್ ಅನುಸರಿಸಿದ ಮಾರ್ಗ ಸರಿಯೇ ಎಂದು ಪ್ರಶ್ನಿಸಿದರು.
ಯಾರೋ ಬಂದು ಬೊಬ್ಬೆ ಹೊಡೆದರೆ ಜನ ಕೇಳುವುದಿಲ್ಲ. ನಮ್ಮನ್ನು ಸೋಲಿಸುವುದು, ಗೆಲ್ಲಿಸುವುದು ಜನರೇ ಹೊರತು ನಾಯಕರಲ್ಲ ಎಂದು ಇದೇ ವೇಳೆ ಅವರು ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದರು.
ಜನರು ಬುದ್ದಿವಂತರಾಗಿದ್ದಾರೆ. ತಮಗೆ ಯಾರು ಬೇಕು? ಯಾರು ಬೇಡ ಎಂಬುದನ್ನು ತೀರ್ಮಾನಿಸುವಷ್ಟು ಜಾಗೃತರಾಗಿದ್ದಾರೆ. ಬೊಬ್ಬೆ ಹೊಡೆದ ತಕ್ಷಣ ಅವರು ಮಾತು ಕೇಳುವರೇ ಎಂದು ಪ್ರಶ್ನಿಸಿದರು.
ಗೆಲ್ಲಿಸುವುದನ್ನು, ಸೋಲಿಸುವುದನ್ನು ಮೇಲೋಬ್ಬ ನೋಡಿಕೊಳ್ಳುತ್ತಾನೆ. ಅವನು ಆಡಿಸಿದಂತೆ ನಾವು ಆಡಬೇಕು. ನಾವೆಲ್ಲರೂ ಪಾತ್ರಧಾರಿಗಳು ಆದರೆ ಕೆಲವರು ಎಲ್ಲವೂ ನಮ್ಮಿಂದಲೇ ನಡೆಯುತ್ತದೆ ಎಂದು ಭಾವಿಸಿದ್ದಾರೆಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
ಲೋಕಸಭೆ ಚುನಾವಣೆಯಲ್ಲಿ ಅತಿರಥ ಮಹಾರಥರೆಲ್ಲ ಪ್ರಚಾರ ಮಾಡಿದರೂ ಒಂದೇ ಸ್ಥಾನ ಗೆಲ್ಲಲು ಕಾರಣ ಏನೆಂಬುದನ್ನು ಮೊದಲು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು.ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಾನು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಮ್ಮನ್ನು ಅನರ್ಹಗೊಳಿಸಿರುವ ಕುರಿತಂತೆ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಮುಂದಿನ ವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಮೊದಲು ನ್ಯಾಯಾಲಯದಲ್ಲಿ ತೀರ್ಪು ಹೊರಬರಲಿ ನಂತರ ತೀರ್ಮಾನಿಸುತ್ತೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಹೀಗಾಗಿ ಇಂದು ಅವರ ನಿವಾಸಕ್ಕೆ ಬಂದು ಅಭಿನಂದಿಸಿದ್ದೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಕಾಂಗ್ರೆಸ್ನಿಂದ ಅನರ್ಹಗೊಂಡಿರುವ ಡಾ.ಕೆ.ಸುಧಾಕರ್ ಹಾಗೂ ಶಿವಾಜಿನಗರದ ಮಾಜಿ ಶಾಸಕ ರೋಷನ್ ಬೇಗ್ ಯಡಿಯೂರಪ್ಪನವರ ಜೊತೆ ರಹಸ್ಯ ಮಾತುಕತೆ ನಡೆಸಿದರು.
ಸ್ಪೀಕರ್ ತಮ್ಮನ್ನು ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಇಂಥ ಸಂದರ್ಭದಲ್ಲೇ ಇಬ್ಬರು ಮಾಜಿ ಶಾಸಕರು ಬಿಎಸ್ವೈ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.