![bangalore-metro-train-3-extra-bogies](http://kannada.vartamitra.com/wp-content/uploads/2018/02/bangalore-metro-train-3-extra-bogies-657x381.jpg)
ಬೆಂಗಳೂರು,ಆ.2-ಮಹಾನಗರದ ಜನರ ಬಹುನಿರೀಕ್ಷಿತ ಮೆಟ್ರೋ ಸಂಚಾರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಮೆಟ್ರೋ ನಾಳೆ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.
ಈ ಮೊದಲು ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ಮೆಟ್ರೋ ಬೇರಿಂಗ್ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಈಗ ಇಂದಿರಾನಗರದ ಬೇರಿಂಗ್ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಬಿಎಂಆರ್ಸಿಎಲ್ ನಿರ್ಮಿಸಿರುವ ಈ ಬೇರಿಂಗ್ಗಳು ಕನಿಷ್ಟ ನೂರು ವರ್ಷ ಬಾಳಿಕೆ ಬರುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಒಂದೊಂದೇ ಪಿಲ್ಲರ್ಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಆರ್ಸಿಎಲ್ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಅವರು, ಇದು ಒಂದು ಸಿವಿಕ್ಸ್ ಸಮಸ್ಯೆ. 2008ರಲ್ಲಿ ಬೇರಿಂಗ್ಗಳನ್ನು ನಿರ್ಮಿಸಲಾಗಿದೆ. ಅವುಗಳ ಆಯುಸ್ಸು 15 ವರ್ಷ. ಇಂದಿರಾನಗರದಲ್ಲಿ ಕಾಣಿಸಿಕೊಂಡಿರುವ ಬಿರುಕಿನ ಬಗ್ಗೆ ಈಗಾಗಲೇ ತಪಾಸಣೆ ನಡೆಸಲಾಗುತ್ತಿದೆ. ಅವುಗಳನ್ನು ಬದಲಾವಣೆ ಮಾಡಬೇಕಿದೆ.ಟ್ರಾನ್ಸರ್ ಶೆಡ್ಯೂಲ್ ಮತ್ತು ಟ್ರಾಕಿಂಗ್ಗಳನ್ನು ಬದಲು ಮಾಡಬೇಕಿದೆ.
ಜನರಿಗೆ ತೊಂದರೆ ಕೊಡುವ ಬದಲು ಆ.3ರಂದು ರಾತ್ರಿ 9.30ಕ್ಕೆ ಎಂಜಿ ರಸ್ತೆಯಿಂದ ಬಯ್ಯಪ್ಪನ ಹಳ್ಳಿಯವರೆಗೆ ಭಾನುವಾರ ಬೆಳಗೆವರೆಗೂ ಮೆಟ್ರೋ ಸಂಚಾರ ನಿಲ್ಲಿಸಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಕಾಮಗಾರಿ ಹೆಚ್ಚು ವಿಳಂಬವಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.