ಬಿಬಿಎಂಪಿಯಿಂದ 30ಕ್ಕೂ ಹೆಚ್ಚು ಸೇತುವೆಗಳ ಕಾರ್ಯದಕ್ಷತೆ ಪರಿಶೀಲನೆ

ಬೆಂಗಳೂರು, ಆ.2- ನಗರದಲ್ಲಿರುವ 30ಕ್ಕೂ ಹೆಚ್ಚು ಮೇಲ್ಸೇತುವೆ ಮತ್ತು ಕೆಳಸೇತುವೆಗಳ ಕಾರ್ಯದಕ್ಷತೆ ಪರಿಶೀಲನೆ ಮಾಡಲು ಬಿಬಿಎಂಪಿ ಮುಂದಾಗಿದೆ.

ಇಡೀ ದೇಶದಲ್ಲೇ ಸುಸಜ್ಜಿತ ರಸ್ತೆ ಮೂಲಭೂತ ಸೌಕರ್ಯ ಹೊಂದಿರುವ ನಮ್ಮ ನಗರದಲ್ಲಿ 30ಕ್ಕೂ ಹೆಚ್ಚು ಮೇಲ್ಸೇತುವೆ, ಗ್ರೇಡ್ ಸೆಪರೇಟರ್, ಕೆಳಸೇತುವೆ ಹಾಗೂ ಮ್ಯಾಜಿಕ್ ಬಾಕ್ಸ್‍ಗಳಿವೆ. ಇವು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಅರಿಯಲು ಮುಂದಾಗಿರುವ ಪಾಲಿಕೆ ಸ್ಟ್ರಕ್ಚರಲ್ ಆಡಿಟ್‍ಗಾಗಿ 50 ಕೋಟಿ ರೂ.ಮೀಸಲಿಟ್ಟಿದೆ.

ಸಿರಸಿ ಮೇಲ್ಸೇತುವೆ, ಕೆಆರ್ ಪುರ ತೂಗುಸೇತುವೆ, ಜಯದೇವ ಮೇಲ್ಸೇತುವೆ, ರಿಚ್‍ಮಂಡ್ ಮೇಲ್ಸೇತುವೆ, ಆನಂದರಾವ್ ಮೇಲ್ಸೇತುವೆ, ವೈಟ್‍ಫೀಲ್ಡ್, ಡೈರಿ ವೃತ್ತ ಗ್ರೇಡ್ ಸಪರೇಟರ್, ನಾಯಂಡಹಳ್ಳಿ, ಎಚ್‍ಎಸ್‍ಆರ್ ಲೇಔಟ್, ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ, ವೆಸ್ಟ್ ಆಫ್ ಕಾರ್ಡ್ ರೋಡ್, ಡಾ.ರಾಜ್‍ಕುಮಾರ್ ರಸ್ತೆ ಕೆಳಸೇತುವೆ ಸೇರಿದಂತೆ 30ಕ್ಕೂ ಹೆಚ್ಚು ಸೇತುವೆಗಳ ಕಾರ್ಯದಕ್ಷತೆ ಪರಿಶೀಲಿಸಲು ಪಾಲಿಕೆ ಡಿಪಿಆರ್ ಸಿದ್ಧಪಡಿಸಿಟ್ಟುಕೊಂಡಿದೆ.

ದಿನದಿಂದ ದಿನಕ್ಕೆ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡು ಈಗಾಗಲೇ ಹಲವಾರು ಸೇತುವೆ ನಿರ್ಮಾಣವಾಗಿವೆ. ಇನ್ನೂ ಕೆಲ ಸೇತುವೆ ನಿರ್ಮಾಣ ಹಂತದಲ್ಲಿವೆ. ಆದರೆ, ಅವುಗಳ ಸುರಕ್ಷತೆ ಬಗ್ಗೆ ಈಗಲೂ ಅನುಮಾನವಿದೆ.

ದೇಶದ ಇತರೆ ಕೆಲವು ಮಹಾನಗರಗಳಲ್ಲಿ ಮೇಲ್ಸೇತುವೆ ಕುಸಿದು ದುರಂತ ಸಂಭವಿಸಿದ ಉದಾಹರಣೆಗಳಿವೆ. ಹಾಗಾಗಿ ಬೆಂಗಳೂರಿನಲ್ಲಿ ಅಂತಹ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಸೇತುವೆಗಳ ಕಾರ್ಯದಕ್ಷತೆ ಬಗ್ಗೆ ಸ್ಟ್ರಕ್ಚರಲ್ ಆಡಿಟ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಮೇಲ್ಸೇತುವೆ ನಿರ್ಮಾಣವಾದ ನಂತರ ಪ್ರತಿವರ್ಷ ಅದನ್ನು ನಿರ್ವಹಣೆ ಮಾಡಬೇಕು. ಡಾಂಬರೀಕರಣ ಮಾಡುವುದು, ಜಾಯಿಂಟ್ ಪಾಯಿಂಟ್‍ಗಳನ್ನು ಪರಿಶೀಲಿಸುವುದು ಮಾಡಬೇಕು. ಆದರೆ, ಇಂತಹವುಗಳ ಕಡೆ ಗಮನ ಹರಿಸಿಲ್ಲ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಮೇಲ್ಸೇತುವೆ ಕುಸಿಯುವ ಭೀತಿ ಇದೆ ಎಂಬ ಆರೋಪ ಕೇಳಿಬರುತ್ತಿದೆ.

ಸೇತುವೆ ನಿರ್ಮಾಣ ಮಾಡುವ ಗುತ್ತಿಗೆದಾರರು ಅಪಘಾತ ಶ್ರೇಣಿ ವರದಿಯನ್ನು ಪ್ರತಿ ವರ್ಷ ಪಾಲಿಕೆಗೆ ನೀಡಬೇಕು. ಆದರೆ, ಯಾರೂ ಈವರೆಗೆ ಇಂತಹ ವರದಿಗಳನ್ನು ಕಳುಹಿಸಿಲ್ಲ. ಸೇತುವೆಗಳ ಗುಣಮಟ್ಟದ ವರದಿ ಕಳುಹಿಸಿದರೆ ಯಾವ್ಯಾವ ಮೇಲ್ಸೇತುವೆ ಅಥವಾ ಕೆಳಸೇತುವೆ ಶಿಥಿಲಗೊಳ್ಳುವ ಹಂತದಲ್ಲಿವೆ ಎಂಬುದು ಗೊತ್ತಾಗುತ್ತದೆ.ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೇತುವೆಗಳ ಗುಣಮಟ್ಟ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ