ಬೆಂಗಳೂರು,ಆ.2- ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಉಪ ಮುಖ್ಯಮಂತ್ರಿಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ವರಿಷ್ಠರ ತೀರ್ಮಾನ ಶಾಸಕರಿಗೆ ನಿರಾಸೆ ಮೂಡಿಸಿದೆ.
ಒಟ್ಟು ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಜೆಪಿ ಹೈಕಮಾಂಡ್ ತೀರ್ಮಾನ ಕೈಗೊಂಡಿದೆ. ಮೊದಲು 10 ಶಾಸಕರು ಮಾತ್ರ ಸಂಪುಟ ಸೇರಲಿದ್ದಾರೆ. ಅನರ್ಹಗೊಂಡ ಶಾಸಕರ ಬಗ್ಗೆ ಸುಪ್ರೀಕೋರ್ಟ್ನಲ್ಲಿ ಬರುವ ತೀರ್ಪು ನೋಡಿಕೊಂಡು 2ನೇ ಹಂತದ ಸಂಪುಟ ವಿಸ್ತರಣೆ ಮಾಡಲಾಗುತ್ತದೆ.
ಆಗಸ್ಟ್ 2 ಮತ್ತು 3ರಂದು ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓಗಳ ಸಭೆ ಕರೆದಿದ್ದಾರೆ. ಆಗಸ್ಟ್ 5ರ ಬಳಿಕ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ. ಸಂಪುಟ ಸೇರುವ ಸಂಭಾವ್ಯ ಸಚಿವರ ಪಟ್ಟಿಯನ್ನು ಈಗಾಗಲೇ ಕಳುಹಿಸಲಾಗಿದ್ದು, ದೆಹಲಿಗೆ ಹೋದಾಗ ಅದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕೆ.ಎಸ್. ಈಶ್ವರಪ್ಪ, ಬಿ.ಶ್ರೀರಾಮುಲು ಮತ್ತು ಆರ್.ಅಶೋಕ ಹೆಸರುಗಳು ಉಪ ಮುಖ್ಯಮಂತ್ರಿ ಹುದ್ದೆಗೆ ಕೇಳಿಬಂದಿತ್ತು. ಆದರೆ, ಹೈಕಮಾಂಡ್ ನಾಯಕರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಲಾಗಿತ್ತು. ಕೆ.ಎಸ್. ಈಶ್ವರಪ್ಪ, ಆರ್.ಅಶೋಕ ಉಪಮುಖ್ಯಮಂತ್ರಿಗಳಾಗಿದ್ದರು. ಈ ಬಾರಿಯೂ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಡಿಸಿಎಂ ಹುದ್ದೆ ಸೃಷ್ಠಿ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು.
ಈ ಬಾರಿ ಡಿಸಿಎಂ ಹುದ್ದೆ ಸೃಷ್ಠಿ ಮಾಡುವುದು ಬೇಡ ಎಂಬುದು ಹೈಕಮಾಂಡ್ ನಾಯಕರ ತೀರ್ಮಾನವಾಗಿದೆ. ಇದರಿಂದಾಗಿ ಶಾಸಕರಿಗೆ ನಿರಾಸೆಯಾಗಿದೆ.ಒಟ್ಟು 2 ಹಂತದಲ್ಲಿ ಸಂಪುಟ ವಿಸ್ತರಣೆ ಮಾಡೋಣ ಎಂದು ವರಿಷ್ಠಿರು ಸೂಚನೆ ನೀಡಿದ್ದಾರೆ.
6 ವರ್ಷಗಳ ಬಳಿಕ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ ಸಿಕ್ಕಿದೆ. ಆದ್ದರಿಂದ, ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಲಿದ್ದಾರೆ ಎಂಬ ನಿರೀಕ್ಷೆ ಶಾಸಕರಲ್ಲಿ ಇತ್ತು. ಆದರೆ, ವರಿಷ್ಠರ ತೀರ್ಮಾನ ಶಾಸಕರ ಅಸಮಾಧಾನಕ್ಕೆ ಕಾರಣವಾಗುವ ನಿರೀಕ್ಷೆ ಇದೆ.
ಆಗಸ್ಟ್ 5ರಂದು ಸಂಸತ್ ಅಧಿವೇಶನ ಪೂರ್ಣಗೊಂಡ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ಸಭೆ ನಡೆಸಲಿದ್ದಾರೆ. ಬಿ. ಎಸ್. ಯಡಿಯೂರಪ್ಪ ಸಹ ದೆಹಲಿಗೆ ಭೇಟಿ ನೀಡಲಿದ್ದಾರೆ. ಮೊದಲ ಹಂತದಲ್ಲಿ ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. 10 ರಿಂದ 15 ಶಾಸಕರು ಸಚಿವರಾಗುವ ಸಾಧ್ಯತೆ ಇದೆ.