ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕಾಶ್ಮೀರದ ಗಡಿ ಸಮಸ್ಯೆ ಎದುರಾಗಿ ಹಲವಾರು ವರ್ಷಗಳೇ ಕಳೆದಿವೆ. ಆ ಸಮಸ್ಯೆ ಜಾಗತಿಕ ಮಟ್ಟದಲ್ಲೂ ಗಮನ ಸೆಳೆದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಮಧ್ಯವರ್ತಿಯಾಗಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಸಹಾಯಹಸ್ತ ಚಾಚಿದ್ದಾರೆ.
ನೆರೆಯ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ತಮ್ಮ ನಡುವಿನ ಬಿಕ್ಕಟ್ಟನ್ನು ಆದಷ್ಟು ಬೇಗ ಬಗೆಹರಿಸಿಕೊಂಡು ಸೌಹಾರ್ದತೆಯಿಂದ ಇರುವುದು ಉತ್ತಮ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಅತ್ಯುತ್ತಮ ವ್ಯಕ್ತಿಗಳು. ಆ ಎರಡೂ ದೇಶಗಳು ಕಾಶ್ಮೀರ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬಯಸಿದಲ್ಲಿ ಅಮೆರಿಕ ಸಹಾಯ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದ ಟ್ರಂಪ್ ಕಾಶ್ಮೀರ ಗಡಿಯ ಸಮಸ್ಯೆಯನ್ನು ಬಗೆಹರಿಸುವ ಆಫರ್ ನೀಡಿದ್ದರು. ಆ ಆಫರ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅವರ ಸಹಾಯಹಸ್ತವನ್ನು ಭಾರತ ತಿರಸ್ಕರಿಸಿದೆ. ಹೀಗಾಗಿ, ಕಾಶ್ಮೀರದ ಗಡಿಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರದ ಮೇಲೆ ನಿಂತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ದೇಶಗಳೆರಡೂ ಒಂದಾದರೆ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಎರಡೂ ದೇಶಗಳಲ್ಲಿ ಶಾಂತಿ ನೆಲೆಸುತ್ತದೆ. ಇದಕ್ಕೆ ಯಾರಾದರೂ ಒಬ್ಬರು ಮುಂದಾಳತ್ವ ವಹಿಸಬೇಕು. ಅದಕ್ಕೆ ಆ ಎರಡೂ ದೇಶಗಳ ಪ್ರಧಾನಿಗಳು ಸಿದ್ಧರಿಲ್ಲ ಎಂದಾದರೆ ಅವರು ಬಯಸಿದರೆ ಅಮೆರಿಕ ಮಧ್ಯವರ್ತಿಯಾಗಲು ಸಿದ್ಧವಿದೆ ಎಂದು ಟ್ರಂಪ್ ಹೇಳಿದ್ದಾರೆ.
ಆದರೆ, ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದ್ದು, ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಕಾಶ್ಮೀರ ಗಡಿ ಸಮಸ್ಯೆಯ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಭಾರತ ಅಮೆರಿಕದ ಸಹಾಯ ಕೋರಿಲ್ಲ ಎಂದು ತಿಳಿಸಿದೆ.