ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ-ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ

ಅಥಣಿ,ಆ.2- ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸೋಮವಾರದಿಂದ ಮಳೆಯ ಅಬ್ಬರ ಹೆಚ್ಚಾದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

ತಾಲೂಕಿನಲ್ಲಿ ಈವರೆಗೂ ವಾಡಿಕೆಯ ಮಳೆ ಸುರಿದಿಲ್ಲ. ಮಳೆ ಇಲ್ಲದಿದ್ದರೂ ಕೆಲ ಗ್ರಾಮಗಳ ಜನ ಪ್ರವಾಹದ ಭೀತಿಯ ಆತಂಕದಲ್ಲಿದ್ದಾರೆ. ನದಿ ಪಾತ್ರದಲ್ಲಿರುವ ತಾಲೂಕಿನ ಜನರಲ್ಲಿ ಭೀತಿ ಆವರಿಸಿದೆ.

ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನದಿ ನೀರಿನಿಂದ ರಸ್ತೆ ಸಂಪರ್ಕ ಕಡಿತಗೊಂಡು ಅಲ್ಲಿನ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇದೇ ರೀತಿ ಮಳೆ ಪ್ರಮಾಣ ಹೆಚ್ಚಾದರೆ ದರೂರ, ಹಲ್ಯಾಳ, ಅವರಖೊಡ ಗ್ರಾಮಗಳು ಹಾಗೂ ದರೂರ ಸೇತುವೆ ಜಲಾವೃತವಾಗುವ ಸಾಧ್ಯತೆಗಳಿವೆ. ತಾಲೂಕು ಆಡಳಿತ ಸಹ ಬರ ನಿರ್ವಹಣೆಗಾಗಿ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದೆ.

ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಕ್ಷಣ-ಕ್ಷಣಕ್ಕೂ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‍ನಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ.

ಹಿಪ್ಪರಗಿ ಬ್ಯಾರೇಜ್‍ನಿಂದ 183400 ಕ್ಯೂಸೆಕ್ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ.

ನಿನ್ನೆ ಮಹಾರಾಷ್ಟ್ರದ ಕೊಯ್ನಾದಲ್ಲಿ 100 ಮಿಮಿ ನೌಜಾ 123 ಮಿಮಿ, ಮಹಾಬಲೇಶ್ವರ 179 ಮಿಮಿ, ಸಾಂಗ್ಲಿ 19 ಮಿಮಿ, ವಾರಣಾ 129 ಮಿಮಿ, ಕೊಲ್ಲಾಪುರ 23 ಮಿಮಿ, ರಾಧಾನಗರಿ 100 ಮಿಮಿ, ದೂಧಗಂಗಾ 118 ಮಿಮಿ, ಯಷ್ಟು ಬಾರಿ ಮಳೆ ಸುರಿದಿದ್ದು ರಾಷ್ಟ್ರದ ವೇದಗಂಗಾ, ದೂಧ್‍ಗಂಗಾ ಹಾಗೂ ಪಂಚಗಂಗಾ ನದಿಗಳ ಮೂಲಕ ಕೃಷ್ಣಾ ನದಿಗೆ ವಿಪರೀತವಾಗಿ ನೀರು ಹರಿದು ಬರುತ್ತಿದೆ.

ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇರುವ ಕಾರಣ ನದಿ ತೀರದ ತಗ್ಗು ಪ್ರದೇಶದಲ್ಲಿನ ವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗಿದೆ. ನೆರೆಯ ಮಹಾರಾಷ್ಟ್ರದಿಂದ ನದಿಗಳಿಗೆ ರಭಸದಿಂದ ನೀರು ಹರಿದು ಬರುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ತೀವ್ರ ಏರಿಕೆ ಕಂಡು ಬರುತ್ತಿದೆ.

ಹೀಗಾಗಿ ನದಿ ತೀರದಲ್ಲಿ ಪ್ರವಾಹ ಭೀತಿ ಇರುವ ಕಾರಣ ಕಟ್ಟೇಚ್ಚರವಹಿಸಲಾಗಿದೆ. ಈಗಾಗಲೇ ಕುಡಚಿ ಸೇತುವೆ ಉಗಾರ ಬಿಕೆ ಸೇತುವೆ ಜಲಾವೃತವಾಗಿದ್ದು, ತಾಲೂಕಿನಲ್ಲಿ ನದಿಪಾತ್ರದ ಜನತೆಗೆ ಜಾಗೃತರಾಗಿರುವಂತೆ ತಹಶೀಲ್ದಾರ್ ಎಂ.ಎನ್. ಬಳಿಗಾರ ತಿಳಿಸಿದ್ದಾರೆ.

ನೆರೆಯ ಮಹಾರಾಷ್ಟ್ರ ರಾಜಾಪೂರ ಬ್ಯಾರೇಜ್ ಹಾಗೂ ತಾಲೂಕಿನ ನದಿತೀರದ ಮಾಂಜರಿ, ಕಲ್ಲೋಳ, ಇಂಗಳಿ, ಯಡೂರ ಗ್ರಾಮಗಳಿಗೆ ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಕ್ಷಣ-ಕ್ಷಣಕ್ಕೂ ಏರಿಕೆ ಕಂಡು ಬರುತ್ತಿದೆ. ನದಿ ತೀರದ ಜನರು ಸದಾ ಜಾಗೃತರಾಗಿರಬೇಕು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಹೇಳಿದ್ದಾರೆ.

ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜು: ಈಗಾಗಲೇ ಜಮಖಂಡಿ ತಾಲೂಕಿನ ಎಲ್ಲಾ ಇಲಾಖೆಗಳ ಸಿಬ್ಬಂದಿಗೆ ಪ್ರವಾಹ ಬರುವುದಕ್ಕಿಂತ ಮುಂಚೆ ಕೆಲವು ಮಹತ್ವದ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಅಗ್ನಿ ಶಾಮಕ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯಿತ ರಾಜ್ಯ ಇಲಾಖೆ, ಬೃಹತ್ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಸಿಬ್ಬಂದಿಗಳಿಗೆ ಪ್ರಕೃತಿ ವಿಕೋಪ ಸಂಭವಿಸುವ ಮುನ್ನ, ಪ್ರವಾಹ ಸಂದರ್ಭದಲ್ಲಿ ಹಾಗೂ ಪ್ರವಾಹದ ನಂತರ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುನ್ನಚ್ಚರಿಕೆ ಕ್ರಮವಾಗಿ ರಕ್ಷಣಾ ಬೋಟ್‍ಗಳನ್ನು, ಹಾವು ಹಿಡಿಯುವ ತಂಡ, ಉತ್ತರ ಕನ್ನಡ-ಕಾರವಾರ ಜಿಲ್ಲೆಗಳಿಂದ ಈಜುಗಾರರನ್ನು ಕರೆಯಿಸಲಾಗಿದೆ.

ತಾಲೂಕಿನ ಮುತ್ತೂರು-ಕಂಕನವಾಡಿ ಗ್ರಾಮಗಳು ಪ್ರವಾಹಕ್ಕೆ ಬೇಗ ನಡುಗಡ್ಡೆಯಾಗುವ ಸಾಧ್ಯತೆ ಇದ್ದು, ಮುತ್ತೂರು-ತುಬಚಿ ಗ್ರಾಮಗಳ ಮಧ್ಯದ ರಸ್ತೆ ಸಂಪೂರ್ಣ ಮುಳುಗಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ, ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗುವಂತೆ ವಿಶೇಷ ಬೋಟ್‍ಗಳನ್ನು ನೀಡಲಾಗಿದೆ.

ತಾಲೂಕಿನ ಶುರ್ಪಾಲಿ ಮತ್ತು ತುಬಚಿಗೆ ತೆರಳುವ ರಸ್ತೆ ಬಂದಾಗುವ ಸಾಧ್ಯತೆ ಇದೆ. ಬೋಟ್ ಚಾಲನೆಗೆ ಸಾಕಷ್ಟು ಪ್ರಮಾಣದ ಸಿಮೇಎಣ್ಣೆ ನೀಡಲಾಗಿದೆ. ತಾಲೂಕಿನ ಯಾವ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಯಾವುದೇ ತೊಂದರೆಯಾಗಿಲ್ಲ. ಗ್ರಾಮದ ಜನತೆಗೆ ನದಿ ತೀರದಲ್ಲಿ ಬಟ್ಟೆ ತೊಳೆಯುವುದಾಗಲೀ, ಮಕ್ಕಳನ್ನು ನದಿ ಕಡೆ ಬಿಡುವುದಾಗಲಿ, ಶುದ್ದ ಕುಡಿವ ನೀರನ್ನು ಬಳಸುವಂತೆ ಸೂಚಿಸಲಾಗಿದೆ. ಈಗಾಗಲೇ ತಾಲೂಕಿನ 27 ನೋಡೆಲ್ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ.

ಹಿಪ್ಪರಗಿ ಬ್ಯಾರೇಜ್ ಎಲ್ಲಾ ಗೇಟ್ ಓಪನ್ : ತಾಲೂಕಿನ ಹಿಪ್ಪರಗಿ ಬ್ಯಾರೇಜ್‍ಗೆ ಈಗಾಗಲೇ ನೀರಿನ ಮಟ್ಟ 518.41 ಮೀಟರ್ ಇದ್ದು, 205832 ಕ್ಯೂಸೆಕ್ಸ್ ಒಳಹರಿವು ಇದ್ದು, ಬ್ಯಾರೇಜ್‍ನ ಎಲ್ಲಾ 22 ಗೇಟ್‍ಗಳನ್ನು ತೆರೆದಿದ್ದು, ಅದರ ಮೂಲಕ ಆಲಮಟ್ಟಿ ಜಲಾಶಯಕ್ಕೆ 230207 ಕ್ಯೂಸೆಕ್ಸ್ ನೀರನ್ನು ಹೂರಬಿಡಲಾಗುತ್ತಿದೆ.

ಭಾರಿ ಮಳೆ: ನಿನ್ನೆ ಮಹಾರಾಷ್ಟ್ರದ ಕೊಯಿನಾದಲ್ಲಿ 100 ಮಿಮಿ, ನೌಜಾ-123 ಮಿಮಿ, ಮಹಾಬಳೇಶ್ವರ-179 ಮಿಮಿ, ಸಾಂಗ್ಲಿ-19 ಮಿಮಿ, ವಾರಣಾ-129ಮಿಮಿ, ಕೋಲ್ಲಾ ಪೂರ- 23ಮಿಮಿ, ರಾಧಾನಗರಿ-100 ಮಿಮಿ, ದೂದಗಂಗಾ-118 ಮಿಮಿ ಯಷ್ಟು ಮಳೆ ಸುರಿದಿದ್ದು, ಇದರಿಂದ ಜಮಖಂಡಿ ಮತ್ತು ಅಥಣಿ ತಾಲೂಕಿನ ಕೆಲವು ಗ್ರಾಮಗಳಿಗೆ ಪ್ರವಾಹ ಬರುವ ಸಾಧ್ಯತೆ ಕಂಡು ಬಂದಿದೆ.

ಅಥಣಿ ತಹಶೀಲ್ದಾರ್ ಎಂ.ಎನ್. ಬಳಿಗಾರ ಮಾತನಾಡಿ, ಮಹಾರಾಷ್ಟ್ರದಲ್ಲಿ ನಿರಂತರವಾಗಿ ಹೀಗೆಯೇ ಮಳೆ ಸುರಿದರೆ ವಾರದೊಳಗೆ ಹಿಪ್ಪರಗಿ ಬ್ಯಾರೇಜ್ ಭರ್ತಿಯಾಗಿ ತಾಲೂಕಿನ ಕೆಲ ಗ್ರಾಮಗಳು ಮುಳುಗುವ ಆತಂಕವಿದೆ. ಮುಂಜಾಗ್ರತಾ ಕ್ರಮವಾಗಿ 9ಬೋಟ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಗತ್ಯಬಿದ್ದ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಬೋಟ್‍ಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಜಮಖಂಡಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ಮಹಾರಾಷ್ಟ್ರದಲ್ಲಿ ಸುರಿವ ಮಳೆಯಿಂದ ಪ್ರವಾಹ ಭೀತಿ ಇದ್ದರೂ, ತಾಲೂ ಕಾಡಳಿತ ಸಂಪೂರ್ಣ ಸಜ್ಜಾಗಿದೆ. ಈಗಾಗಲೇ ಗಂಜಿ ಕೇಂದ್ರ ತೆರೆಯುವ, ಜಾನು ವಾರುಗಳಿಗೆ ಮೇವು ಸಂಗ್ರಹಕ್ಕೆ ಕ್ರಮ ಕೈಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ