ಬೆಂಗಳೂರು,ಆ.2-ಬಿಜೆಪಿಯವರು ಯಾರನ್ನ ಬೇಕಾದರೂ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲಿ, ಎಲ್ಲರನ್ನೂ ಕರೆದುಕೊಂಡು ಹೋಗಲಿ. ಇದು ಕೊನೆಯ ಆಟ. ಏನು ಮಾಡುತ್ತಾರೋ ಮಾಡಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ನಂತರ ಫಲಿತಾಂಶ ಏನಾಗಲಿದೆ ಎಂಬುದು ನಮಗೆ ಗೊತ್ತಿಲ್ಲ. ಅದನ್ನು ಊಹೆ ಮಾಡಿ ಹೇಳಲು ನಾನು ಜ್ಯೋತಿಷಿ ಅಲ್ಲ ಎಂದು ಹೇಳಿದರು.
ಬಿಜೆಪಿಯವರು ಕಾಂಗ್ರೆಸ್ನ ಕೆಲವು ಶಾಸಕರನ್ನು ಸೆಳೆಯಲು ಪ್ರಯತ್ನಿಸಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಏನು ಮಾಡುತ್ತಾರೋ ಮಾಡಲಿ, ಎಷ್ಟು ಜನ ಬೇಕೋ ಅಷ್ಟು ಜನರನ್ನು ತೆಗೆದುಕೊಳ್ಳಲಿ ಎಲ್ಲರನ್ನೂ ಕರೆದುಕೊಂಡು ಹೋಗಲಿ, ಇದು ಕೊನೆಯಾಟ ಆಗಿರುವುದರಿಂದ ಅವರಿಗೆ ಬೇಕಾದ್ದನ್ನು ಮಾಡಿಕೊಳ್ಳಲಿ ಎಂದರು.
ಮುನಿರತ್ನ ಭೇಟಿಯಾಗಿಲ್ಲ:
ಅನರ್ಹಗೊಂಡಿರುವ ಶಾಸಕ ಮುನಿರತ್ನ ನನ್ನನ್ನು ಭೇಟಿಯಾಗಿಲ್ಲ. ನನ್ನ ಭೇಟಿಯಾಗಿರುವ ಬಗ್ಗೆ ಆಧಾರಗಳಿದ್ದರೆ ತೋರಿಸಲಿ, ಯಾರೂ ನನ್ನನ್ನು ಭೇಟಿಯಾಗಿಲ್ಲ. ಎಂದರಲ್ಲದೆ ಅನರ್ಹಗೊಂಡ ಶಾಸಕರ ಸಂಪರ್ಕವಿರುವ ಬಗ್ಗೆ ಉತ್ತರಿಸಲು ನಿರಾಕರಿಸಿದರು.
ರಾಜಕೀಯವಾಗಿ ನಾನು ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ನನ್ನದೇ ಆದ ರೀತಿ ರಾಜಕಾರಣವನ್ನು ನಾನು ಮಾಡಿಕೊಂಡು ಬಂದಿದ್ದೇನೆ. ಅದನ್ನು ಮುಂದುವರೆಸುತ್ತೇನೆ. ಮುನಿರತ್ನ ಅವರು ರಾಜೀನಾಮೆ ಕೊಟ್ಟಾಗಿದೆ. ಮುಂದೆ ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ವಿಪಕ್ಷ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಅರ್ಜಿ ಹಾಕಿಕೊಂಡು ಓಡಾಡುವುದು ನನ್ನ ಜಾಯಮಾನವಲ್ಲ. ಸದ್ಯಕ್ಕೆ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮುಂದೆ ನಡೆಯುವ ಉಪಚುನಾವಣೆಗಳಲ್ಲಿ ಇವರ ಮಾರ್ಗದರ್ಶನವನ್ನು ಅನುಸರಿಸುತ್ತೇವೆ. ನಾನಂತೂ ಯಾವ ಆಕಾಂಕ್ಷಿಯೂ ಅಲ್ಲ. ಸದ್ಯಕ್ಕೆ ಮಾಜಿ ಮಂತ್ರಿಯಾಗಿದ್ದೇನೆ. ನನ್ನ ಕ್ಷೇತ್ರಕ್ಕೆ ಭೇಟಿ ಕೊಟ್ಟು ಜನರ ಕಷ್ಟಸುಖ ಕೇಳಲು ನಮ್ಮ ನಾಯಕರು ಅವಕಾಶ ಮಾಡಿಕೊಟ್ಟರೆ ಸಾಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.