ಬೆಂಗಳೂರು,ಆ.2- ಜನರು ಕಚೇರಿಯಿಂದ ಕಚೇರಿಗೆ ಅಲೆಯುವುದು ತಪ್ಪಬೇಕು. ಪ್ರಾಮಾಣಿಕ ಅಧಿಕಾರಿಗಳ ಜತೆ ನಾನು ಇರುತ್ತೇನೆ. ಯಾರ ದೂರು ಬಂದರೂ ಸೊಪ್ಪು ಹಾಕುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಜನರ ಸಮಸ್ಯೆಗಳಿಗೆ ಎಲ್ಲಾ ಹಂತದ ಅಧಿಕಾರಿಗಳು ಸ್ಪಂದಿಸಬೇಕು. ಆಡಳಿತ ಯಂತ್ರ ಜಿಲ್ಲಾ ಮಟ್ಟದಲ್ಲೇ ಚುರುಕಾಗಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಹೊತ್ತು ಜನರು ಜಿಲ್ಲಾ ಕಚೇರಿ ಅಥವಾ ರಾಜಧಾನಿ ಬೆಂಗಳೂರಿಗೆ ಬರುವುದನ್ನು ತಪ್ಪಿಸಬೇಕು. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳ ಜತೆ ನಾನಿರುತ್ತೇನೆ.
ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ದೂರು ನೀಡಿದರೆ ಸೊಪ್ಪು ಹಾಕುವುದಿಲ್ಲ. ಆದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಗುಡುಗಿದರು.
ಮುಖ್ಯಮಂತ್ರಿ ಆದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಸಿಇಒ, ಪ್ರಾದೇಶಿಕ ಆಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳ ಜತೆ ಬರಗಾಲ ನಿರ್ವಹಣೆ ಕುರಿತಂತೆ ಇಂದು ಸಭೆ ನಡೆಸಿದ ಯಡಿಯೂರಪ್ಪ, ಮೈ ಚಳಿ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದರು.
ನಾವು ಮತ್ತು ನೀವು (ಅಧಿಕಾರಿಗಳು)ಜನರ ತೆರಿಗೆ ಹಣದಲ್ಲಿ ಬದುಕುತ್ತಿದ್ದೇವೆ. ಅವರ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಇದ್ದೂ ಸತ್ತಂತೆ. ಜನಪ್ರತಿನಿಧಿಗಳು ಏನೇ ಹೊತ್ತು ತಂದರೂ ಅದನ್ನು ಆಲಿಸಿ. ಅವರ ದೂರುಗಳಿಗೆ ನಾನು ಸೊಪ್ಪು ಹಾಕುವುದಿಲ್ಲ. ನಿಮ್ಮ ಜತೆ ಸದಾ ನಾನು ಇರುತ್ತೇನೆ. ಜ್ವಲಂತ ಸಮಸ್ಯೆಗಳಿಗೆ ಮೈ ಚಳಿಬಿಟ್ಟು ಸಮರೋಪಾದಿಯಲ್ಲಿ ಕೆಲಸ ಮಾಡಿ ಎಂದು ಸೂಚಿಸಿದರು.
ಮುಖ್ಯಕಾರ್ಯದರ್ಶಿಗಳು ಪ್ರತಿ ತಿಂಗಳು ಒಮ್ಮೆಯಾದರೂ ಒಂದೊಂದು ಜಿಲ್ಲೆಗೆ ಭೇಟಿ ನೀಡಬೇಕು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಎರಡು ಬಾರಿಯಾದರೂ ಪ್ರವಾಸ ಮಾಡಿ. ನಾನು ಪ್ರತಿ ತಿಂಗಳು ಯಾರು ಎಲ್ಲಿಗೆ ಹೋಗಿದ್ದರು ಎಂಬುದರ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಬಿಎಸ್ವೈ ಗುಡುಗಿದರು.
ಅಧಿಕಾರಿಗಳು ಸ್ಪಂದಿಸಿದಾಗ ಮಾತ್ರ ಜನಪರ ಸರ್ಕಾರ ಇದೇ ಎಂಬ ಭಾವನೆ ಜನರಿಗೆ ಬರುತ್ತದೆ. ಕಳೆದ ಮೂರು ತಿಂಗಳಿನಿಂದ ರಾಜಕೀಯದಲ್ಲಿ ಉಂಟಾದ ಗೊಂದಲದ ಪರಿಸ್ಥಿತಿಯಿಂದಾಗಿ ಅಭಿವೃದ್ಧಿ ಈಗ ಕುಂಟಿತವಾಗಿದೆ. ಇದನ್ನು ಸರಿದೂಗಿಸುವ ಜವಾಬ್ದಾರಿ ನಮ್ಮ -ನಿಮ್ಮ ಮೇಲಿದೆ ಎಂದು ಕಿವಿಮಾತು ಹೇಳಿದರು.
ನನಗೆ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ರಾಜ್ಯದಲ್ಲಿ ಒಂದು ಕಡೆ ಭೀಕರ ಬರಗಾಲವಿದೆ. ಮತ್ತೊಂದು ಕಡೆ ಪ್ರವಾಹ ಉಂಟಾಗಿದೆ. ಅದನ್ನು ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು.ನಿಮಗೆ ಸಮಸ್ಯೆಗಳ ಅರಿವಾಗಬೇಕು. ಆಗ ಮಾತ್ರ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ದಿಢೀರನೆ ಹಳ್ಳಿಗಳಿಗೆ ಭೇಟಿ ಕೊಡಬೇಕು.ಆಗ ನಿಮ್ಮ ಕೆಳಹಂತದ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.ನೀವು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಬೇಕು. ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆ ತನಕ ಕಚೇರಿಯಲ್ಲಿ ಇರಬೇಕು. ಆಗ ಮಾತ್ರ ಸಿಬ್ಬಂದಿಯೂ ಬರುತ್ತಾರೆ. ಅಂದಿನ ಕಡತಗಳು ಅಂದೇ ವಿಲೇವಾರಿಯಾಗಬೇಕೆಂದು ಅಧಿಕಾರಿ ವರ್ಗಕ್ಕೆ ಸಿಎಂ ತಾಕೀತು ಮಾಡಿದರು.
ರಾಜ್ಯದಲ್ಲಿ ಶೇ.42ರಷ್ಟು ಮಳೆ ಕೊರತೆ ಇದೆ. ಶೇ.18ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.ಶೇ.32ರಷ್ಟು ಮಲೆನಾಡಿನಲ್ಲಿ ಮಳೆಯ ಕೊರತೆ ಇದೆ.
ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. 105 ತಾಲ್ಲೂಕುಗಳಲ್ಲಿ ಅಂತರ್ಜಲ ಕುಸಿತವಾಗಿದೆ.ಕಳೆದ ಬಾರಿಗಿಂತ ಬರ ಪರಿಸ್ಥಿತಿ ಈಗ ಗಂಭೀರವಾಗಿದೆ ಎಂದು ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು.
ಪರಿಸ್ಥಿತಿಯನ್ನು ಸಮಾರೋಪಾದಿಯಲ್ಲಿ ಅಧಿಕಾರಿಗಳು ನಿಭಾಯಿಸಬೇಕು. ದನಕರುಗಳಿಗೆ ಮೇವು, ನೀರು ಸಿಗಬೇಕು. ಜನರು ವಲಸೆ ಹೋವುದನ್ನು ತಡೆಗಟ್ಟಲು ನರೇಗಾ ಯೋಜನೆಯನ್ನು ಸಮಪರ್ಕವಾಗಿ ಅನುಷ್ಟಾನ ಮಾಡಿ. 3067 ಗ್ರಾಮಗಳಲ್ಲಿ ಈಗಲೂ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತದೆ ಎಂದರೆ ಬರಗಾಲದ ಸಮಸ್ಯೆ ನಿಮಗೆ ಅರ್ಥವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆಯಾಗಬೇಕು. ಇದು ನಮ್ಮ ಮೊದಲ ಆದ್ಯತೆ ಕೂಡ.ಶೇ.60ರಿಂದ 70ರಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಇದಕ್ಕೆ ಕಾರಣ ನೀರಿನ ಕೊರತೆ. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿನ್ನೇ ಒದಗಿಸಬೇಕೆಂದು ಸೂಚಿಸಿದರು.
ಕಾನೂನಿನ ಕುಂಟು ನೆಪ ಹೇಳಬೇಡಿ:
ಕೆಲವು ಅಧಿಕಾರಿಗಳು ಕಾನೂನಿನ ಕುಂಟು ನೆಪ ಹೇಳಿ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸಿಗದಂತೆ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಬಡವರು, ಕಡು ಬಡವರು, ಕಾರ್ಮಿಕರ ಕೆಲಸಗಳಿಗೆ ಕಾನೂನುಗಳು ಅಡ್ಡಿಯಾಗಬಾರದು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣ ಇರುವುದು ಇಟ್ಟುಕೊಳ್ಳುವುದಕ್ಕಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅದನ್ನು ಖರ್ಚು ಮಾಡಬೇಕು. ನಿಮಗೆ ಹಣದ ಕೊರತೆ ಇದ್ದರೆ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯಿರಿ. ಅಗತ್ಯವಿರುವಷ್ಟು ಹಣ ನೀಡುತ್ತಾರೆ ಎಂದು ಹೇಳಿದರು.
ಪ್ರತಿಯೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 618.01 ಕೋಟಿ ಹಣವನ್ನು ಬರಗಾಲ ನಿರ್ವಹಣೆಗೆ ನೀಡಲಾಗಿದೆ. ಇದರಲ್ಲಿ 422 ಕೋಟಿ ಹಣವನ್ನು ತುರ್ತು ಪರಿಸ್ಥಿತಿ ನಿಭಾಯಿಸಲು ಮೀಸಲಿಟ್ಟಿದ್ದೇವೆ. ಜನರ ಸಮಸ್ಯೆಗಳ ನಿವಾರಣೆಗೆ ಹಣಕಾಸಿನ ತೊಂದರೆ ಇರುವುದಿಲ್ಲ. ಮೊದಲು ನಿಮಗೆ ಇಚ್ಛಾಶಕ್ತಿ ಇರಬೇಕು ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ತಿಳಿಸಿದರು.
ಬೆಳೆವಿಮೆ ಕಡ್ಡಾಯವಾಗಿ ನೋಂದಣಿ ಮಾಡುವಂತೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಪ್ರಧಾನಮಂತ್ರಿಗಳ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಕಂತುಗಳಲ್ಲಿ 6ಸಾವಿರ ಹಣ ನೀಡುತ್ತದೆ. ನಾವು ಕೂಡ ಇದೇ ಯೋಜನೆಯಡಿ ಎರಡು ಕಂತುಗಳಲ್ಲಿ ತಲಾ ಎರಡೆರಡು ಸಾವಿರ ಹೆಚ್ಚುವರಿ ಹಣವನ್ನು ನೀಡಲು ತೀರ್ಮಾನಿಸಿದ್ದೇವೆ. 15-20 ದಿನಗಳಲ್ಲಿ ಈ ಹಣವು ಫಲಾನುಭವಿಗಳ ಖಾತೆಗೆ ನೇರವಾಗಿ ಸೇರಲಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದಂತೆ ನಾವೂ ಕೂಡ ಬಿಡುಗಡೆ ಮಾಡಲಿದ್ದೇವೆ ಎಂದರು.
ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳು ಕನಿಷ್ಠ ಪಕ್ಷ ತಿಂಗಳಿಗೆ ಒಮ್ಮೆಯಾದರೂ ನಿಮ್ಮ ಜಿಲ್ಲೆಗಳಲ್ಲಿರುವ ವಸತಿ ನಿಲಯಗಳಿಗೆ ಭೇಟಿ ಕೊಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆಯೇ? ವಿದ್ಯಾರ್ಥಿಗಳ ಕೊಠಡಿಗಳು , ಶೌಚಾಲಯಗಳು ಸ್ವಚ್ಛವಾಗಿವಿಯೇ ಎಂಬುದನ್ನು ಪರಿಶೀಲಿಸಬೇಕು.
ನಿಮ್ಮ ಮಕ್ಕಳು ಅಲ್ಲೇ ವ್ಯಾಸಂಗ ಮಾಡುತ್ತಿದ್ದರೆ ಒಂದು ಕ್ಷಣ ಅಲ್ಲಿ ನೀವು ಮಕ್ಕಳನ್ನು ಓದುವುದಕ್ಕೆ ಬಿಡುತ್ತಿದ್ದೀರಾ ಎಂದು ಆತ್ಮಾವಲೋಕನ ಮಾಡಿಕೊಳ್ಳುವಂತೆ ಕಿವಿ ಹಿಂಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆ ಬಾವಿಗಳ ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಕುಂಟು ನೆಪ ಹೇಳಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಯಾವ ಅಧಿಕಾರಿಗಳನ್ನು ನಾನು ಸುಮ್ಮನೆ ಬಿಡುವುದಿಲ್ಲ. ನೀವು ವಿದ್ಯುತ್ ಪೂರೈಕೆ ಮಾಡದಿದ್ದರೆ ಪರಿಸ್ಥಿತಿ ಪರಿಣಾಮ ಬೇರೆಯಾಗಿರುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಸಾಮಾಜಿಕ ಭದ್ರತಾ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಪಿಂಚಣಿ ಸೌಲಭ್ಯ ಎಲ್ಲರಿಗೂ ತಲುಪುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಮೃತಪಟ್ಟವರ ಹೆಸರನ್ನು ಈ ಯೋಜನೆಯಿಂದ ತೆಗೆದು ಹಾಕಿ. ಜನರ ಜತೆ ಸರ್ಕಾರ ಇದೆ ಎಂಬ ಮನೋಭಾವನೆಯನ್ನು ಮೂಡಿಸುವಂತೆ ಕೆಲಸ ಮಾಡಿ. ನಿಮ್ಮ ಜತೆ ನಾನು ಇರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ನೀಡಿದರು.
ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಸಲಹೆಗಾರ ಲಕ್ಷ್ಮೀನಾರಾಯಣ, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.