ಬೆಂಗಳೂರು,ಆ.2- ಐಪಿಎಸ್ ಅಧಿಕಾರಿ, ಕೆಎಸ್ಆರ್ಪಿ ಕಮಾಂಡೆಂಟ್ ಅಜಯ್ ಹಿಲೋರಿ ಅವರು ವಿಚಾರಣೆಗಾಗಿ ಇಂದು ಎಸ್ಐಟಿ ಮುಂದೆ ಹಾಜರಾಗಿದ್ದಾರೆ.
ಹಿಲೋರಿ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.ಅದರಂತೆ ಅವರು ಇಂದು ಹಾಜರಾಗಿದ್ದಾರೆ ಎಂದು ಡಿಸಿಪಿ ಗಿರೀಶ್ ಅವರು ತಿಳಿಸಿದ್ದಾರೆ.
ಅಜಯ್ ಹಿಲೋರಿ ಅವರು ಈ ಹಿಂದೆ ಬೆಂಗಳೂರು ನಗರದ ಪೂರ್ವ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು.ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಐಎಂಎ ಸಂಸ್ಥೆಗಳು ಪೂರ್ವ ವಿಭಾಗದ ವ್ಯಾಪ್ತಿಗೆ ಬರುತ್ತವೆ.
ಆ ಸಂದರ್ಭದಲ್ಲಿ ಆರ್ಬಿಐ ಸೂಚನೆ ಆಧರಿಸಿ ಉಪವಿಭಾಗೀಯ ಅಧಿಕಾರಿ ಮತ್ತು ತಹಸೀಲ್ದಾರ್ ಅವರು ವಿಚಾರಣೆ ಮಾಡಿದ್ದರು. ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಮರ್ಷಿಯಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದರು.
ನಂತರದ ದಿನಗಳಲ್ಲಿ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ಗೆ ಕ್ಲೀನ್ಚಿಟ್ ಕೊಡಿಸಲಾಗಿತ್ತು ಎಂಬ ಆರೋಪಗಳಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಸಿದ ವಿಶೇಷ ತನಿಖಾದಳದ ಅಧಿಕಾರಿಗಳು ಆ ಸಂದರ್ಭದಲ್ಲಿ ನಡೆದ ತನಿಖೆ ಹಾಗೂ ಅದರ ಬೆಳವಣಿಗೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು ಎಂದು ಹೇಳಲಾಗಿದೆ.
ಎಸ್ಐಟಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಅಜಯ್ ಹಿಲೋರಿ ಅವರು ಸಮರ್ಪಕ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.