ಬೆಂಗಳೂರು, ಆ.1- ಉದ್ಯಮಿ, ಕಾಫಿ ಡೇ ಮಾಲೀಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಸಾವಿನ ಬಗ್ಗೆ ತನಿಖೆಯನ್ನು ಮಂಗಳೂರು ನಗರ ಪೊಲೀಸರು ತೀವ್ರಗೊಳಿಸಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸರು ಹೆಚ್ಚು ಜವಾಬ್ದಾರಿಯುತವಾಗಿ ಹಾಗೂ ಬಹಳ ಜಾಗೃತಿಯಿಂದ ತನಿಖೆಯನ್ನು ನಡೆಸುತ್ತಿದ್ದಾರೆ.
ಸಿದ್ದಾರ್ಥ್ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ವಿವಿಧ ದೃಷ್ಟಿಕೋನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅವರ ಕಾರಿನ ಚಾಲಕ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿರುವ ತನಿಖಾಧಿಕಾರಿಗಳು ಆ ನಿಟ್ಟಿನಲ್ಲಿ ತೀವ್ರ ತನಿಖೆಯನ್ನು ಮುಂದುವರೆಸಿದ್ದಾರೆ.
ಸಿದ್ದಾರ್ಥ್ ಅವರ ವ್ಯವಹಾರ ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ಉದ್ಯಮಗಳಲ್ಲಿನ ಪಾಲುದಾರರು, ಸ್ನೇಹಿತರು, ಕುಟುಂಬ ವರ್ಗದವರು ಹಾಗೂ ಅವರ ಹಿತೈಷಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಲು ತನಿಖಾ ತಂಡ ನಿರ್ಧರಿಸಿದೆ.
ಅವರು ನಾಪತ್ತೆಯಾದ ಹಾಗೂ ಶವದ ದೊರೆತ ಸ್ಥಳಗಳ ಪರಿಶೀಲನೆ ಮಾಡಿರುವ ತನಿಖಾಧಿಕಾರಿಗಳು ನದಿಯಿಂದ ಶವವನ್ನು ಹೊರತಂದ ಮೀನುಗಾರರ ಹೇಳಿಕೆಯನ್ನೂ ಸಹ ದಾಖಲಿಸಿಕೊಂಡಿದ್ದಾರೆ.
ನಿನ್ನೆ ಮಂಗಳೂರು ಪೊಲೀಸರ ತಂಡ ಬೆಂಗಳೂರು ನಗರಕ್ಕೆ ಆಗಮಿಸಿ ವಿಠಲ್ ಮಲ್ಯ ರಸ್ತೆಯಲ್ಲಿರುವ ಕಾಫಿ ಡೇ ಕೇಂದ್ರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಲ್ಲಿನ ಸಿಬ್ಬಂದಿಗಳಿಂದ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದೆ.
ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಹಾಗೂ ತನಿಖೆ ಪೂರ್ಣಗೊಂಡ ನಂತರವೇ ಸಿದ್ದಾರ್ಥ್ ಅವರ ಸಾವು ಹೇಗಾಯಿತು, ಅದಕ್ಕೆ ಕಾರಣ ಯಾವುದು ಎಂಬುದು ನಿಖರವಾಗಿ ತಿಳಿದುಬರಲಿದೆ.