ಬೆಂಗಳೂರು, ಆ.1- ಶಾಸಕತ್ವದಿಂದ ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಪ್ರಶ್ನಿಸಿ ಅನರ್ಹಗೊಂಡ ಜೆಡಿಎಸ್ನ ಮೂವರು, ಕಾಂಗ್ರೆಸ್ನ 11 ಶಾಸಕರು ಇಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಸಚಿವ ವಿಶ್ವನಾಥ್ ಸೇರಿದಂತೆ ಹಲವು ಅನರ್ಹ ಶಾಸಕರು ನವದೆಹಲಿಯಲ್ಲಿ ವಕೀಲರೊಂದಿಗೆ ಚರ್ಚಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅನರ್ಹಗೊಂಡ 17 ಶಾಸಕರ ಪೈಕಿ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಈಗಾಗಲೇ ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಆರ್.ಶಂಕರ್ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನುಳಿದ 14 ಜನ ಇಂದು ಅರ್ಜಿ ಸಲ್ಲಿಸಿದರು. ಅನರ್ಹಗೊಂಡ ಶಾಸಕರ ಪರ ಮುಕುಲ್ ರೊಹಟಗಿ ವಾದ ಮಂಡಿಸಲಿದ್ದಾರೆ.
ಸುಪ್ರೀಂಕೋರ್ಟ್ ಯಾವಾಗ ವಿಚಾರಣೆ ಕೈಗೆತ್ತಿಕೊಳ್ಳುತ್ತದೆ, ಯಾವಾಗ ವಿಚಾರಣೆ ಪೂರ್ಣಗೊಳ್ಳುತ್ತದೆ ಎಂಬುದರ ಮೇಲೆ ಅನರ್ಹ ಗೊಂಡವರ ಭವಿಷ್ಯ ನಿರ್ಧಾರವಾಗಲಿದೆ.
ಸ್ಪೀಕರ್ ಅವರ ಆದೇಶದ ಪ್ರತಿ ಪಡೆದಿರುವ ಅನರ್ಹಗೊಂಡ ಶಾಸಕರು ಇಂದು ಅರ್ಜಿ ಸಲ್ಲಿಸಿದರು.ಈ ನಡುವೆ ಕಾಂಗ್ರೆಸ್ ನಮ್ಮ ವಾದವನ್ನು ಆಲಿಸಬೇಕೆಂದು ಕೇವಿಯಟ್ ಸಲ್ಲಿಸಲಿದೆ.
ಇತ್ತ ಅನರ್ಹಗೊಂಡ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸಿದ್ಧತೆ ಮಾಡಿಕೊಳ್ಳತೊಡಗಿವೆ. ಅನರ್ಹಗೊಂಡವರು ಅನರ್ಹತೆ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಏನಾಗಲಿದೆ ಎಂಬುದು ಕುತೂಹಲಕ್ಕೆಡೆಮಾಡಿದೆ.
ಈ ಸಂಬಂಧ ನವದೆಹಲಿಯಲ್ಲಿ ಇಂದು ಮಾತನಾಡಿದ ಎಚ್.ವಿಶ್ವನಾಥ್ ಅವರು ಸ್ಪೀಕರ್ ಅವರಿಗೆ ಅನರ್ಹತೆಗೊಳಿಸುವ ಅಧಿಕಾರವಿದೆ. ಅದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವ ಅಧಿಕಾರ ನಮಗೂ ಇದೆ. ಅವರ ಆದೇಶದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಅವರು ಕೇವಿಯಟ್ ಹಾಕಲಿ. ನಮ್ಮದೇನೂ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಪ್ರತಾಪ್ಗೌಡ ಪಾಟೀಲ್ ಮಾತನಾಡಿ, ತೀರ್ಪು ಬಂದ ನಂತರ ನಮ್ಮ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ. ನಾವ್ಯಾರೂ ಬಿಜೆಪಿ ಪಕ್ಷ ಸೇರುವುದಿಲ್ಲ. ಸಚಿವಾಕಾಂಕ್ಷಿಗಳಲ್ಲ ಎಂದು ತಿಳಿಸಿದ್ದಾರೆ.
ಬಿ.ಸಿ.ಪಾಟೀಲ್ ಮಾತನಾಡಿ, ಅನರ್ಹತೆಗೂ ಮೊದಲು ವಿಚಾರಣೆಗೆ ಸ್ಪೀಕರ್ ಅವರು ನಮಗೆ ಅವಕಾಶ ನೀಡಿಲ್ಲ. ಸ್ಪೀಕರ್ ಅವರು ತಮ್ಮದೇ ಆದ ದೃಷ್ಟಿಕೋನದಲ್ಲಿ ತೀರ್ಪು ನೀಡಿದ್ದಾರೆ. ಅವರ ತೀರ್ಪಿನಿಂದ ನಮಗೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಬಂದಿದ್ದೇವೆ. ಇಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.