ಬೆಂಗಳೂರು, ಆ.1- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದು ಹೋದವರು ಉಪ ಚುನಾವಣೆಯ ಮುನ್ಸೂಚನೆ ಸಿಗುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ದುಂಬಾಲು ಬೀಳುತ್ತಿದ್ದು, ತಮ್ಮನ್ನು ಕ್ಷಮಿಸಿ ಎಂದು ಮನವಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಅದರಲ್ಲೂ ಬೆಂಗಳೂರಿನ ಶಾಸಕರು ಶರಣಾಗತಿಯ ಸಂದೇಶ ಕಳುಹಿಸಿದ್ದು, ಉಪಚುನಾವಣೆಯಲ್ಲಿ ತಮ್ಮ ಬಗ್ಗೆ ಮೃದು ಧೋರಣೆ ಅನುಸರಿಸುವಂತೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಮೊನ್ನೆ ರಾತ್ರಿ ಮಾಜಿ ಶಾಸಕ ಮುನಿರತ್ನ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ಭೇಟಿಗೂ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಿದ್ದರಾಮಯ್ಯ ಅವರು ಈವರೆಗೂ ನಾಯಕರ ಭೇಟಿಗೆ ಅವಕಾಶ ನೀಡಿಲ್ಲ.
ಬೈರತಿ ಬಸವರಾಜ್, ಸುಧಾಕರ್, ಎಂ.ಟಿ.ಬಿ.ನಾಗರಾಜ್, ಪ್ರತಾಪ್‍ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಸಿದ್ದರಾಮಯ್ಯ ಅವರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮುನಿರತ್ನ ಅವರು ಆಗಿದ್ದೆಲ್ಲ ಆಗಿ ಹೋಯ್ತು.ನಮ್ಮನ್ನು ಕ್ಷಮಿಸಿ, ರಾಜಕೀಯ ದ್ವೇಷ ಬೇಡ, ನಮ್ಮ ಭವಿಷ್ಯಕ್ಕೆ ಅಡ್ಡಗಾಲು ಆಗಬೇಡಿ ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಈಗಾಗಲೇ ಅನರ್ಹಗೊಂಡಿರುವ 17 ಮಂದಿ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದು, ಇಂದು ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ನ್ಯಾಯಾಲಯ ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದರೆ. ಉಪ ಚುನಾವಣೆಯಲ್ಲಿ ರಾಜೀನಾಮೆ ನೀಡುವವರ ಪೈಕಿ ಎಂ.ಬಿ.ಟಿ.ನಾಗರಾಜ್ ಹೊರತು ಪಡಿಸಿ ಉಳಿದ ಎಲ್ಲರೂ ಮತ್ತೆ ಸ್ಪರ್ಧಿಸುವ ಸಾಧ್ಯತೆ ಇದೆ.
ಹೀಗಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸ್ಪರ್ಧೆಗೆ ನಿಂತರೆ ಗೆಲ್ಲುವುದು ಕಷ್ಟ ಎಂಬ ಕಾರಣಕ್ಕಾಗಿ ಹಿರಿಯ ನಾಯಕರ ಜತೆ ಸಂಧಾನದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.