ಬೆಂಗಳೂರು, ಆ.1- ಮಿನಿ ಸಮರವೆಂದೇ ಹೇಳಲಾಗುತ್ತಿರುವ 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ಅಭ್ಯರ್ಥಿಗಳ ಶೋಧ ಕಾರ್ಯಕ್ಕೆ ಮುಂದಾಗಿದೆ.
2023ರ ಮೇವರೆಗೂ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ ನಾಯಕರು ಸ್ಪಷ್ಟ ಬಹುಮತ ಪಡೆದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಸದ್ಯಕ್ಕೆ ಬಿಜೆಪಿ 105 ಶಾಸಕರನ್ನು ಹೊಂದಿದ್ದು, ಓರ್ವ ಪಕ್ಷೇತರ ಶಾಸಕ ಬೆಂಬಲ ನೀಡಿದ್ದಾರೆ. ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಬೇಕೆಂದರೆ ಇನ್ನು 6 ಸದಸ್ಯರನ್ನು ಗೆಲ್ಲಿಸಲೇಬೇಕು. 112 ಸದಸ್ಯರನ್ನು ಹೊಂದಿದರೂ ಒಂದಿಲ್ಲೊಂದು ಅಸಮಾಧಾನಗಳು ಉಂಟಾಗಿ ಭಿನ್ನಮತಕ್ಕೆ ಕಾರಣವಾಗಬಹುದೆಂಬ ಹಿನ್ನೆಲೆಯಲ್ಲಿ ಕನಿಷ್ಠ 120 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ.
17 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 15 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ತೀರ್ಮಾನಿಸಿರುವ ಬಿಜೆಪಿ ನಾಯಕರು ಈಗಾಗಲೇ ಅದಕ್ಕೆ ಬೇಕಾದ ಸಿದ್ದತೆಗಳನ್ನು ಕೈಗೊಂಡಿದ್ದಾರೆ.
ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ನಿರ್ಧಾರವನ್ನು ಶಾಸಕರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಆದೇಶವನ್ನು ಕೋರ್ಟ್ ರದ್ದುಪಡಿಸಿದರೆ ಇಲ್ಲವೇ ಎತ್ತಿ ಹಿಡಿದರೆ ಬಿಜೆಪಿ ಉಪಚುನಾವಣೆಯ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಅನರ್ಹತೆ ಮಾಡಿರುವ ಸ್ಪೀಕರ್ ಕ್ರಮ ಸರಿಯಾಗಿದೆ ಎಂದರೆ ಈ ಚುನಾವಣಾ ಅವಧಿ ಮುಗಿಯುವವರೆಗೂ ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಅನರ್ಹತೆಯನ್ನೇ ರದ್ದು ಮಾಡಿದರೆ 17 ಮಂದಿ ಶಾಸಕರು ಪುನಃ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ.
ಹೀಗಾಗಿ ಈಗಾಗಲೇ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ. ಅನರ್ಹಗೊಂಡಿರುವ ಶಾಸಕರ ಕ್ರಮವನ್ನು ನ್ಯಾಯಾಲಯ ಎತ್ತಿ ಹಿಡಿದರೆ ಅವರ ಕುಟುಂಬದವರಿಗೆ ಇಲ್ಲವೇ ಬೇರೋಬ್ಬರಿಗೆ ಟಿಕೆಟ್ ನೀಡುವ ಚಿಂತನೆ ನಡೆಸಲಾಗಿದೆ.
ರಾಜಧಾನಿ ಬೆಂಗಳೂರಿನ ಕೆ.ಆರ್.ಪುರಂ, ಯಶವಂತಪುರ, ಆರ್.ಆರ್.ನಗರ ಮತ್ತು ಮಹಾಲಕ್ಷ್ಮಿಲೇಔಟ್ನಲ್ಲಿ ಅನರ್ಹಗೊಂಡಿರುವ ಶಾಸಕರಿಗೆ ಪರ್ಯಾಯವಾಗಿ ಬೇರೊಬ್ಬ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶೋಧ ನಡೆಸಲಾಗುತ್ತಿದೆ.
ಈ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿದ್ದು, ಈ ಹಿಂದೆ ಯಶವಂತಪುರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಗೆದ್ದಿದ್ದಾರೆ.
ಕೆ.ಆರ್.ಪುರಂನಲ್ಲೂ ನಂದೀಶ್ ಜಯಗಳಿಸಿದ್ದರು. ಆರ್.ಆರ್.ನಗರ ಮತ್ತು ಮಹಾಲಕ್ಷ್ಮಿಲೇಔಟ್ನಲ್ಲಿ ಬಿಜೆಪಿ ಸಂಘಟನೆ ಅತ್ಯಂತ ಪ್ರಬಲವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಲೋಕಸಭೆ ಚುನಾವಣೆಯಲ್ಲಿ ಈ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ನಾಯಕರು ಮುನ್ನಡೆ ಸಾಧಿಸಿದ್ದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕಿರುವುದು ಹಾಗೂ ಆರ್ಎಸ್ಎಸ್ನ ನೆರವು ಪಡೆದರೆ ಗೆಲುವು ಕಷ್ಟಕರವಾಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿ ಮುಖಂಡರಿದ್ದಾರೆ.
ಕೆ.ಆರ್.ಪುರಂನಿಂದ ಮಾಜಿ ಶಾಸಕ ಭೆರತಿ ಬಸವರಾಜ್ ತಮ್ಮ ಪುತ್ರ ಇಲ್ಲವೇ ಕುಟುಂಬದವರನ್ನು ಕಣಕ್ಕಿಳಿಸದಿದ್ದರೆ ಮಾಜಿ ಶಾಸಕ ನಂದೀಶ್ ರೆಡ್ಡಿ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮಹಾಲಕ್ಷ್ಮಿ ಲೇಔಟ್ನಲ್ಲಿ ಗೋಪಾಲಯ್ಯ ತಮ್ಮ ಪತ್ನಿ ಹೇಮಲತಾ ಗೋಪಾಲಯ್ಯ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಿದ್ದಾರೆ. ಈಗಾಗಲೇ ಬಿಬಿಎಂಪಿ ಸದಸ್ಯರಾಗಿ, ಉಪಮೇಯರ್ ಆಗಿ, ಸ್ಥಾಯಿಸಮಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ.
ಒಂದು ವೇಳೆ ಹೇಮಲತಾ ಗೋಪಾಲಯ್ಯ ಹಿಂದೇಟು ಹಾಕಿದರೆ ಬಿಜೆಪಿಯಿಂದ ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್ ಈಗಾಗಲೇ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ವ್ಯಕ್ತಪಡಿಸಿರುವುದರಿಂದ ಅವರ ಪುತ್ರ ಕಣಕ್ಕಿಳಿಯುವ ಸಾಧ್ಯತೆ ಇದೆ. ಇಲ್ಲದಿದ್ದರೆ ಬಿಜೆಪಿ ಪ್ರಬಲ ಅಭ್ಯರ್ಥಿಯ ಶೋಧ ನಡೆಸಲಿದೆ.
ಆರ್.ಆರ್.ನಗರದಲ್ಲಿ ಮುನಿರತ್ನ ತಮ್ಮ ಪುತ್ರ ಇಲ್ಲವೇ ಪತ್ನಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಆಲೋಚಿಸಿದ್ದಾರೆ. ಇಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿರುವುದರಿಂದ ಸುಮಾರು 5ಕ್ಕೂ ಹೆಚ್ಚು ಆಕಾಂಕ್ಷಿಗಳು ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದಾರೆ.
ಹುಣಸೂರಿನಲ್ಲಿ ಶಾಸಕ ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಸಂಘಟನೆ ಇಲ್ಲದಿರುವುದರಿಂದ ಕೊನೆ ಕ್ಷಣದಲ್ಲಿ ಯಾರಾದರೊಬ್ಬರು ಕಣಕ್ಕಿಳಿಯಬಹುದು.
ಬೆಳಗಾವಿ ಜಿಲ್ಲೆ ಗೋಕಾಕ್ನಿಂದ ರಮೇಶ್ ಜಾರಕಿಹೊಳಿ ಪುತ್ರ ಇಲ್ಲವೇ ಅವರ ಅಳಿಯ ಅಂಬಿರಾವ್ ಪಾಟೀಲ್ ಕಣಕ್ಕಿಳಿಯಬಹುದು. ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ರಮೇಶ್ ಜಾರಕಿಹೊಳಿ ಪುತ್ರ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಥಣಿಯಿಂದ ಮಹೇಶ್ ಕುಮಟಳ್ಳಿ ಕಣಕ್ಕಿಳಿಯಲು ಹಿಂದೇಟು ಹಾಕಿರುವುದರಿಂದ ಮಾಜಿ ಸಚಿವ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ಸವದಿ ಕಣಕ್ಕಿಳಿಯಲಿದ್ದಾರೆ.
ಕಾಗವಾಡದಿಂದ ಶ್ರೀಮಂತಪಾಟೀಲ್ ಪುನಃ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿಲ್ಲವಾಗಿದ್ದರಿಂದ ಅವರ ಪುತ್ರ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಹಿರೇಕೆರೂರಿನಿಂದ ಬಿ.ಸಿ.ಪಾಟೀಲ್ ತಮ್ಮ ಮಗಳನ್ನು ಕಣಕ್ಕಿಳಿಸುವ ಸಂಭವವಿದೆ. ರಾಣಿ ಬೆನ್ನೂರಿನಿಂದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಧಿಕವಾಗಿರುವುದರಿಂದ ಯಾರನ್ನು ಕಣಕ್ಕಿಳಿಸಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಯಚೂರು ಜಿಲ್ಲೆ ಮಸ್ಕಿಯಿಂದ ಪ್ರತಾಪ್ ಗೌಡ ಪಾಟೀಲ್ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಬಿಜೆಪಿ ಮುಖಂಡರಿಗೆ ಒತ್ತಡ ಹಾಕಿದ್ದಾರೆ.
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಪುತ್ರನನ್ನು ಕಣಕ್ಕಿಳಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಡಾ.ಸುಧಾಕರ್ ತಮ್ಮ ಪತ್ನಿ ಪ್ರೀತಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಒತ್ತಡ ಹಾಕಿದ್ದಾರೆ.
ಶಿವಾಜಿನಗರದಿಂದ ರೋಷನ್ಬೇಗ್ ಪುತ್ರನನ್ನೇ ಕಣಕ್ಕಿಳಿಸುವ ಬಗ್ಗೆ ಆಲೋಚಿಸಿದ್ದಾರೆ. ವಿಜಯನಗರದಿಂದ ಆನಂದ್ ಸಿಂಗ್ ಮಗನಿಗೆ ವೇದಿಕೆ ಸಿದ್ದಪಡಿಸುವತ್ತ ಗಮನಹರಿಸಿದ್ದಾರೆ.
ಹೀಗೆ ಉಪಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದ್ದು, ಕನಿಷ್ಠ 15 ಕ್ಷೇತ್ರಗಳನ್ನು ಗೆಲ್ಲುವು ಗುರಿ ಇಟ್ಟುಕೊಂಡಿದೆ.