ಬೆಂಗಳೂರು, ಜೂ.29- ನಗರದಲ್ಲಿರುವ ರೈಲ್ವೆ ಕೆಳ ಸೇತುವೆಗಳಲ್ಲಿ ಸರಿಯಾದ ನಿರ್ಮಾಣ ಇಲ್ಲದೆ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮೇಯರ್ ಗಂಗಾಂಬಿಕೆ ಅವರು ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿಯವರಲ್ಲಿ ಮನವಿ ಮಾಡಿದರು.
ನಗರದ ಸಿಟಿ ರೈಲ್ವೆ ನಿಲ್ದಾಣದ 3ನೆ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಕೇಂದ್ರ ಸಚಿವ ಸುರೇಶ್ ಅಂಗಡಿಯವರಿಗೆ ರೈಲ್ವೆ ಕೆಳ ಸೇತುವೆಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಗಮನ ಸೆಳೆದು, ಇದರಿಂದ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು.
ಈ ಬಗ್ಗೆ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಡಿ.ಜಿ. ಮಲ್ಯ ಅವರನ್ನು ಇತ್ತೀಚೆಗೆ ಭೇಟಿಯಾಗಿ ಕ್ರಮ ತೆಗೆದುಕೊಳ್ಳುವಂತೆ ವಿವರವಾದ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದರು.
ಮೇಯರ್ ಮನವಿಗೆ ಸ್ಪಂದಿಸಿದ ಸಚಿವರು, ರೈಲ್ವೆ ಕೆಳ ಸೇತುವೆಯಲ್ಲಿ ಆಗುತ್ತಿರುವ ತೊಂದರೆಯನ್ನು ನಾನೂ ಗಮನಿಸಿದ್ದೇನೆ. ನಗರದಲ್ಲಿರುವ ಎಲ್ಲಾ ರೈಲ್ವೆ ಕೆಳ ಸೇತುವೆಗಳನ್ನು ಉನ್ನತೀಕರಿಸಿ ಕೆಳಭಾಗದಲ್ಲಿ ಯಾವುದೇ ರೀತಿಯ ಮಲಿನ ನೀರು ಸೋರಿಕೆಯಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಜನರಲ್ ಮ್ಯಾನೇಜರ್ ಎ.ಕೆ. ಸಿಂಗ್ ಅವರಿಗೆ ಆದೇಶಿಸಿದರು.