ಕೊಹ್ಲಿ ಸೈನ್ಯಕ್ಕೆ ಎದುರಾದ ಆತಿಥೇಯ ಆಂಗ್ಲರ ಸವಾಲು :ವಿಶ್ವ ಯುದ್ಧದಲ್ಲಿ ಸಮಬಲದ ಹೋರಟ ನೀಡಿದ ಉಭಯ ತಂಡಗಳು

ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಯುದ್ದದಲ್ಲಿ ಕೊಹ್ಲಿ ಸೈನ್ಯ ಬರೀ ಗೆಲುವುಗಳನ್ನೆ ಕಂಡು ದಾಪುಗಾಲು ಹಾಕುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ಗೆಲುವುಗಳನ್ನೆ ಕಂಡಿರುವ ವಿರಾಟ್ ಪಡೆ ಇದೀಗ ಸೆಮಿಫೈನಲ್ ಕನಸು ಕಾಣುತ್ತಿದೆ.

ವಿಶ್ವಯುದ್ಧದಲ್ಲಿ ಸಮಬಲದ ಹೋರಾಟ ನೀಡಿವೆ ಉಭಯ ತಂಡಗಳು
ವಿಶ್ವ ಯುದ್ದದಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಸಮಬಲದ ಹೋರಾಟ ನೀಡಿವೆ. ಇದುವರೆಗೂ ಮಹಾ ಸಮರದಲ್ಲಿ ಇಂಡೋ – ಆಂಗ್ಲೊ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. ಬನ್ನಿ ಹಾಗಾದ್ರೆ ವಿಶ್ವಯುದ್ದದಲ್ಲಿ ಇಂಡೋ – ಆಂಗ್ಲೊ ಕದನಗಳು ಹೇಗಿದ್ದವು ಅನ್ನೋದನ್ನ ನಾವ್ ತೋರಿಸ್ತೀವಿ ನೋಡಿ.

 

 

 

 

 

 

 

 

 

 

 

 

 

 

 

ವರ್ಷ 1975:ಆಂಗ್ಲರಿಗೆ 202 ರನ್ಗಳ ಭರ್ಜರಿ ಗೆಲುವು
1975ರ ಮೊದಲ ವಿಶ್ವಕಪ್ ಕ್ರಿಕೆಟ್ ಜನಕರ ನಾಡು ಆಂಗ್ಲರ ನಾಡಲ್ಲಿ ನಡೆಯಿತು. ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾದವು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಮೈಕ್ ಡೆನ್ನಿಸ್ ಬ್ಯಾಟಿಂಗ್ ಆಯ್ದುಕೊಂಡ್ರು.

ಇಂಗ್ಲೆಂಡ್ ಓಪನರ್ ಡೆನ್ನಿಸ್ ಅಮಿಸ್ ಅವರ ಭರ್ಜರಿ ಶತಕದ ನೆರವಿನಿಂದ ಆಂಗ್ಲರು ನಿಗದಿತ 60 ಓವರ್ಗಳಲ್ಲಿ 4 ವಿಕೆಟ್ಗೆ 334 ರನ್ ಕಲೆ ಹಾಕಿತು. ಬೃಹತ್ ಸವಾಲು ಬೆನ್ನತ್ತಿದ ವೆಂಕಟ್ರಾಘವನ್ ನೇತೃತ್ವದ ಭಾರತ ನಗಿದಿತ ಓವರ್ನಲ್ಲಿ 3 ವಿಕೆಟ್ಗೆ 132 ರನ್ ಕಲೆ ಹಾಕುವಲ್ಲಿ ಮಾತ್ರ ಶಕ್ತವಾಯಿತು. ಆತಿಥೇಯ ಆಂಗ್ಲರು ವಿಶ್ವಕಪ್ನ ಮೊದಲ ಪಂದ್ಯ ಗೆದ್ದು ಹೊಸ ದಾಖಲೆ ಬರೆದ್ರು.ಜೊತೆಗೆ ಭಾರ ವಿರುದ್ಧ ಮೊದಲ ಪಂದ್ಯ ಗೆದ್ದರು.

ವರ್ಷ 1983:ಭಾರತಕ್ಕೆ 6 ವಿಕೆಟ್ ಜಯ
ಮೊದಲ ವಿಶ್ವಕಪ್ನಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಇಂಗ್ಲೆಂಡ್ ಆಂಗ್ಲರ ನಾಡಲ್ಲಿ ನಡೆದ ಮೂರನೇ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಮತ್ತೆ ಮುಖಾಮುಖಯಾದವು. ಓಲ್ಡ್ ಟ್ರಾಫೋರ್ಡ್ನಲ್ಲಿ ಬಾಬ್ ವಿಲ್ಲಿಸ್ ನೇತೃತ್ವದ ಇಂಗ್ಲೆಂಡ್ ತಂಡ ಕಪಿಲ್ ಡೆವಿಲ್ಸ್ ತಂಡವನ್ನ ಎದುರಿಸಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 60 ಓವರ್ಗಳಲ್ಲಿ 213 ರನ್ ಕಲೆ ಹಾಕಿತು. 217 ರನ್ ಟಾರ್ಗೆಟ್ ಬೆನ್ನತ್ತಿದ ಕಪಿಲ್ ಡೆವಿಲ್ಸ್ ಪಡೆ ಯಶ್ಪಾಲ್ ಶರ್ಮಾ ಮತ್ತು ಸಂದೀಪ್ ಪಾಟೀಲ್ ಅವರ ಅರ್ಧ ಶತಕದ ನೆರವಿನಿಂದ 6 ವಿಕೆಟ್ಗಳ ಗೆಲುವು ಪಡೆದು ಫೈನಲ್ಗೆ ಎಂಟ್ರಿಕೊಟ್ಟಿತ್ತು.

ವರ್ಷ 1987:ಆಂಗ್ಲರಿಗೆ 35 ರನ್ ಗೆಲುವು
1987 ವಿಶ್ವಕಪ್ ಭಾರತದಲ್ಲಿ ನಡೆದಿತ್ತು. ಈ ಹಿಂದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಸೋತಿದ್ದ ಇಂಗ್ಲೆಂಡ್ ನಾಲ್ಕು ವರ್ಷದ ನಂತರ ಸೆಮಿಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗಿತ್ತು. ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ದುಕೊಂಡಿತ್ತು. ಇಂಗ್ಲೆಂಡ್ ತಂಡ ಓಪನರ್ ಗ್ರಹಂ ಗೂಚ್ ಅವರ ಶತಕ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 254 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಕಪಿಲ್ ದೇವ್ ಪಡೆ 45.3 ಓವರ್ಗಳಲ್ಲಿ 219 ರನ್ಗಳಿಗೆ ಅಲೌಟ್ ಆಗಿ ಟೂರ್ನಯಿಂದ ಹೊರ ಬಿತ್ತು. ಇದರೊಂದಿಗೆ ಇಂಗ್ಲೆಂಡ್ ತಂಡ ಸೇಡು ತೀರಿಸಿಕೊಂಡಿತು.

ವರ್ಷ 1992 :ಆಂಗ್ಲರಿಗೆ ರೋಚಕ 9 ರನ್ ಗೆಲುವು
1992 ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಪರ್ತ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲರು ಮೊದಲು ಬ್ಯಾಟಿಂಗ್ ಮಾಡಿದ್ರು. ನಾಯಕ ಗ್ರಹಂ ಗೂಚ್ ಮತ್ತು ರಾಬಿನ್ ಸ್ಮಿತ್ ಅವರ ಅರ್ಧ ಶತಕ ನೆರವಿನಿಂದ ನಿಗದಿತ ಓವರ್ನಲ್ಲಿ 9 ವಿಕೆಟ್ಗೆ 236 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಬೆನ್ನತ್ತಿದ ಅಜರುದ್ದೀನ್ ನೇತೃಥ್ವದ ಭಾರತ ತಂಡ 227 ರನ್ಗಳಿಗೆ ಸರ್ವ ಪತನ ಕಂಡು 9 ರನ್ಗಳ ವಿರೋಚಿತ ಸೋಲು ಕಂಡಿತು.

ವರ್ಷ 1999: ಟೀಂ ಇಂಡಿಯಾಗೆ 63 ರನ್ಗಳ ಭರ್ಜರಿ ಜಯ
1999 ವಿಶ್ವಕಪ್ ಇಂಗ್ಲೆಂಡ್ನಲ್ಲಿ ನಡೆದಿತ್ತು. ಸೂಪರ್ ಸಿಕ್ಸ್ನಲ್ಲಿ ಭಾರತ ಎದುರಾಳಿ ಆತಿಥೇಯ ಇಂಗ್ಲೆಂಡ್ ಆಗಿತ್ತು. ಬರ್ಮಿಂಗ್ಯಾಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಅಜರುದ್ದೀನ್ ನೇತೃತ್ವದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಅರ್ಧ ಶತಕದ ನೆರವಿನಿಂದ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 232 ರನ್ ಕಲೆ ಹಾಕಿತು. ಸುಲಭ ಟಾರ್ಗೆಟ್ ಬೆನ್ನತ್ತಿದ ಆಂಗ್ಲರು ಭಾರತದ ದಾಳಿಗೆ ತತ್ತರಿಸಿ 45.2 ಓವರ್ಗಳಲ್ಲಿ 169 ರನ್ಗಳಿಗೆ ಸರ್ವ ಪತನ ಕಂಡಿತು.

ವರ್ಷ 2003: ಟೀಂ ಇಂಡಿಯಾ 82 ರನ್ಗಳಿಂದ ಜಯಭೇರಿ
2003ರ ವಿಶ್ವಕಪ್ ಸೌತ್ ಆಫ್ರಿಕಾದಲ್ಲಿ ನಡೆದಿತ್ತು. ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಟೀಂಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಕಿಂಗ್ಸ್ಮೇಡ್ನಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಅಂದಿನ ನಾಯಕ ಸೌರವ್ ಗಂಗೂಲಿ ಬ್ಯಾಟಿಂಗ್ ಆಯ್ದಕೊಂಡ್ರು . ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರ ಅರ್ಧ ಶತಕದ ನೆರವಿನಿಂದ 9 ವಿಕೆಟ್ಗೆ 250 ರನ್ ಕಲೆ ಹಾಕಿತು. ಡೀಸೆಂಟ್ ಟಾರ್ಗೆಟ್ ಬೆನ್ನತ್ತಿದ ನಾಸೀರ್ ಹುಸೇನ್ ಪಡೆ ವೇಗಿ ಆಶೀಶ್ ನೆಹ್ರಾ ದಾಳಿಗೆ ತತ್ತರಿಸಿ 82 ರನ್ಗಳ ಸೋಲು ಕಂಡಿತು.

ವರ್ಷ 2011:ಪಂದ್ಯ ಟೈ
2011ರ ವಿಶ್ವಕಪ್ ಆರತದಲ್ಲಿ ನಡೆಯಿತು. ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಧೋನಿ ನೇತೃತ್ವದ ಟೀಮ್ ಇಂಡಿಯಾ ಆಂಗ್ಲರನ್ನ ಬೆಂಗಳೂರಿನಲ್ಲಿ ಎದುರಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂಇಂಡಿಯಾಗೆ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರ ಶತಕ ನೆರವಿನಿಂದ 338 ರನ್ಗಳಿಗೆ ಆಲೌಟ್ಆಯಿತು. ಬಿಗ್ ಟಾರ್ಗೆಟ್ ಬೆನ್ನತ್ತಿದ ಆಂಗ್ಲರಿಗೆ ಕ್ಯಾಪ್ಟನ್ ಆ್ಯಂಡ್ರಿಸ್ ಸ್ಟ್ರಾಸ್ ಅವರ 158ರನ್ ಮತ್ತು ಇಯಾನ್ ಬೆಲ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದರಿಂದ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿತು.

ಒಟ್ಟಾರೆ ವಿಶ್ವಕಪ್ನಲ್ಲಿ ಸಮಬಲದ ಹೋರಾಟ ನೀಡಿರುವ ಉಭಯ ತಂಡಗಳು ನಾಳಿನ ಪಂದ್ಯದಲ್ಲಿ ಯಾರು ಯಾರ ಮೇಲೆ ಸವಾರಿ ಮಾಡ್ತಾರೆ ಅನ್ನೋದು ಕೂತೂಹಲದ ವಿಷಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ