ಹುಸಿಯಾದ ಹವಾಮಾನ ಇಲಾಖೆ ನಿರೀಕ್ಷೆ

ಬೆಂಗಳೂರು, ಜೂ.28- ವಾಡಿಕೆಗಿಂತ ಈ ಬಾರಿ ಮಾನ್ಸೂನ್ ತಡವಾಗಿದೆ. ಆದರೂ, ಉತ್ತಮ ಮಳೆಯಾಗಲಿದೆ ಎಂಬ ಭಾರತೀಯ ಹವಾಮಾನ ಇಲಾಖೆ ನಿರೀಕ್ಷೆ ಹುಸಿಯಾಗಿದೆ.ಆಷಾಢ ಮಾಸ ಆರಂಭಕ್ಕೆ ದಿನಗಣನೆ ಶುರುವಾದರೂ ರಾಜ್ಯದಲ್ಲಿ ಮಳೆ ಸುಳಿವಿಲ್ಲದೆ ಜನರು ತತ್ತರಿಸುವಂತಾಗಿದೆ.

ಜೂನ್ ಆರಂಭವಾಗುತ್ತಿದ್ದಂತೆ ಮಲೆನಾಡಿನ ಭಾಗದಲ್ಲಿ ಸುರಿಯುತ್ತಿದ್ದ ಮಳೆ ಈ ಬಾರಿ ಕಣ್ಮರೆಯಾಗಿದೆ. ಕಳೆದ ವರ್ಷ ಇದೇ ಹೊತ್ತಿಗೆ ಧುಮ್ಮಿಕ್ಕಿ ಹರಿಯುತ್ತಿದ್ದ ನದಿಗಳು ಇದೀಗ ಬರಿದಾಗಿದ್ದು, ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಶೂನ್ಯ ಸಂಗ್ರಹಣೆಗೆ ಇಳಿದಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ನೀರಿನ ಸಮಸ್ಯೆಯನ್ನು ಎದುರಿಸುವುದು ಕಷ್ಟ ಎಂದು ರಾಜ್ಯ ಸರ್ಕಾರವೂ ಈಗಾಗಲೇ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಜುಲೈ ಮೊದಲ ವಾರದಿಂದ ಮೋಡ ಬಿತ್ತನೆ ಮಾಡಲಾಗುವುದು ಎಂದು ಈಗಾಗಲೇ ಸಚಿವ ಹೆಚ್.ಕೆ.ಪಾಟೀಲ್ ಈ ಹಿಂದೆಯೇ ಹೇಳಿದ್ದರು.

2018ರ ಆಗಸ್ಟ್ ಆರಂಭದಲ್ಲಿ ಹುಚ್ಚೆದ್ದು ಬಂದ ಮಳೆಗೆ ಕೇರಳಕ್ಕೆ ಕೇರಳವೇ ಕೊಚ್ಚಿಹೋಗಿತ್ತು.ಹಿಂದೆಂದೂ ಕಂಡಿರದ ಭೀಕರ ಪ್ರವಾಹಕ್ಕೆ ಕೇರಳದ 485 ಜೀವಗಳು ಬಲಿಯಾಗಿದ್ದವು. ನಂತರ ಕೊಡಗು, ಚಿಕ್ಕಮಗಳೂರು, ಮಂಗಳೂರು ಭಾಗದಲ್ಲೂ ಮಳೆ ಶುರುವಾಗಿ ಪ್ರವಾಹದ ಭೀತಿ ಎದುರಾಗಿತ್ತು. ಕೇರಳದ ಮಟ್ಟಿಗಲ್ಲದಿದ್ದರೂ ಕೊಡಗಿನಲ್ಲೂ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಸರ್ಕಾರ ಹರಸಾಹಸ ಪಟ್ಟಿತ್ತು.

ಇದೀಗ ರಾಜ್ಯದೆಲ್ಲೆಡೆ ಬರದ ಛಾಯೆ ಆವರಿಸಿದ್ದು, ರೈತರ ಬೆಳೆಗಳೆಲ್ಲ ಒಣಗಿ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.ಉತ್ತರ ಕರ್ನಾಟಕದ ಭಾಗಗಳಲ್ಲಿ ಜಲಾಶಯ, ಕೆರೆಗಳೂ ಬತ್ತಿಹೋಗಿದ್ದು, ಕುಡಿಯುವ ನೀರಿಗೂ ತತ್ವಾರ ತೆಗೆಯುವಂತಾಗಿದೆ. ಇತ್ತ ಮಲೆನಾಡು ಮತ್ತು ಕರಾವಳಿ ಭಾಗದಲ್ಲೂ ಇದೇ ಮೊದಲ ಬಾರಿಗೆಂಬಂತೆ ಬಾವಿ, ಬೋರ್ವೆಲ್ಗಳೆಲ್ಲ ಒಣಗಲಾರಂಭಿಸಿವೆ. ಪ್ರತಿವರ್ಷ ಮೇ ಕೊನೆಯಲ್ಲೇ ಶುರುವಾಗುವ ಮಳೆಗಾಲ ಜೂನ್ ತಿಂಗಳಲ್ಲಿ ಚುರುಕುಗೊಳ್ಳುತ್ತಿತ್ತು. ಈ ಬಾರಿ ಜೂನ್ ತಿಂಗಳು ಮುಗಿಯುತ್ತಿದ್ದರೂ ಮಳೆ ಚುರುಕುಗೊಂಡಿಲ್ಲ. ಕಳೆದ ವಾರದಿಂದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

ಕಾಫಿನಾಡಿನಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದೆ ಜನರು ಕಂಗಲಾಗಿದ್ದಾರೆ. ಕಳೆದ ಬಾರಿ ಜೂನ್ ತಿಂಗಳಲ್ಲಿ ಆದ ಭಾರೀ ಮಳೆಯಿಂದಾಗಿ ಶೃಂಗೇರಿಯ ಧ್ಯಾನ ಮಂಟಪ ಮುಳಗಿ, ಪ್ರವಾಹದ ಸ್ಥಿತಿ ಏರ್ಪಟ್ಟಿತ್ತು. ಈ ವೇಳೆ ಮಳೆ ನಿಲ್ಲಲಿ ಎಂದು ಸ್ಥಳೀಯರು ಇಲ್ಲಿನ ಮಳೆ ದೇವರು ಎಂದು ಪ್ರಸಿದ್ಧಿಯಾಗಿದ್ದ ಋಷ್ಯಶೃಂಗನ ಮೊರೆ ಹೋಗಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ.

ಮಲೆನಾಡಿನ ಮಡಿಲಲ್ಲೇ ಬರದ ಛಾಯೆ ಆವರಿಸಿದೆ. ಜನರು ಮಳೆಬರಲಿ ಎಂದು ಈಗ ಮತ್ತೆ ಋಷ್ಯಶೃಂಗ ದೇವರ ಮೊರೆ ಹೋಗಿದ್ದಾರೆ. ಕಳೆದ ಒಂದು ವಾರದಿಂದ ಸಂಪೂರ್ಣ ಮಳೆ ಕ್ಷೀಣಗೊಂಡಿದ್ದು, ಕೊಪ್ಪ, ಮೂಡಿಗೆರೆ, ಶೃಂಗೇರಿ,ಎನ್.ಆರ್ ಪುರ, ಚಿಕ್ಕಮಗಳೂರಿನಲ್ಲಿ ಮಳೆ ಇಲ್ಲದೆ ರೈತರು ಪರದಾಡುವ ಸ್ಥಿತಿ ಉಂಟಾಗಿದೆ.

ಮಾನ್ಸೂನ್ ಆರಂಭವಾಗುತ್ತಿದ್ದಂತೆ ಮೊದಲು ತುಂಬುತ್ತಿದ್ದ ಜಲಾಶಯ ಎಂದರೆ ಮೈಸೂರಿನ ಹೆಚ್.ಡಿ ಕೋಟೆಯಲ್ಲಿರುವ ಕಬಿನಿ ಜಲಾಶಯ. ಕೊಡಗು, ಕೇರಳದಲ್ಲಿ ಮಳೆಯಾದರೆ ಅತಿ ಶೀಘ್ರವಾಗಿ ತುಂಬುತ್ತಿದ್ದ ಜಲಾಶಯ ಈ ಬಾರಿ ತೀವ್ರತೆರನಾದ ನೀರಿನ ಅಭಾವ ಎದುರಿಸುತ್ತಿದ್ದು, ಈ ಭಾಗದ ರೈತರು ಹಾಗೂ ಜನಸಾಮಾನ್ಯರು ಸಹ ಆತಂಕಕ್ಕೀಡಾಗಿದ್ದಾರೆ.

ಸಮರ್ಪಕ ಮಳೆಯಿಲ್ಲದ ಕಾರಣ ಕಬಿನಿ ಜಲಾಶಯದ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಜಲಾಶಯದ ನೀರು ಇಷ್ಟು ಪ್ರಮಾಣದಲ್ಲಿ ಕಡಿಮೆಯಾಗಲು ಕಾರಣ ಏನೆಂಬ ವಸ್ತುಸ್ಥಿತಿ ಅರಿಯಲು ಕೇಂದ್ರ ಜಲ ತಂಡ ಆಗಮಿಸಿದ್ದು, ಡ್ಯಾಂನಿಂದ ಹೊರಹೋಗುವ ನೀರಿನ ಪ್ರಮಾಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನೀರಿನ ಮಟ್ಟ ತೀವ್ರ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡಲಾಗುತ್ತಿದೆ ಎನ್ನುವ ಆರೋಪ ಸಹ ಹೇಳಿ ಬಂದಿದೆ.

ಕಬಿನಿ ತುಂಬದಿದ್ದರೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಲಿದೆ. ಅಲ್ಲದೇ, ಜಲ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಹೊರ ಹರಿವಿನ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.ಅಲ್ಲದೆ, ನೀರಿನ ಹರಿವಿನ ಮಾಹಿತಿ ಕುರಿತು ಶೀಘ್ರವೇ ಡಿಜಿಟಲೈಸ್ ಮಾಡುವಂತೆಯೂ ಕೇಂದ್ರ ತಂಡ ಸೂಚನೆ ನೀಡಿದೆ.

ಜೂನ್ 15ರಿಂದ ರಾಜ್ಯಕ್ಕೆ ಮಾನ್ಸೂನ್ ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಆ ನಿರೀಕ್ಷೆಯೂ ಸುಳ್ಳಾಯಿತು.ಇದೀಗ ಕೆಲವೇ ದಿನಗಳಲ್ಲಿ ದಕ್ಷಿಣ ಭಾರತದತ್ತ ಮಾನ್ಸೂನ್ ಬರಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆಯೇ ನೀಡಿದೆ. ಮೊದಲು ಕೇರಳಕ್ಕೆ ತಂಪೆರೆಯಲಿರುವ ಮಳೆ ನಂತರ ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೇ ಉತ್ತರ ಭಾರತದ ಕಡೆಗೆ ಹೋಗಲಿದೆ. ಜೂನ್ 1ರ ವೇಳೆಗೆ ಕೇರಳಕ್ಕೆ ಮಳೆ ಬರಬೇಕಾಗಿತ್ತು. ಅದರಂತೆ ಅಲ್ಲಿ ಜೂನ್ ಆರಂಭದಲ್ಲಿ ಮಳೆಯೇನೋ ಶುರುವಾಯಿತು. ಆದರೆ, ಆಮೇಲೆ ಕ್ರಮೇಣ ಮಳೆ ಕಡಿಮೆಯಾಯಿತು.

ಈ ಬಾರಿ ಮಳೆಗಾಲ ಶುರುವಾಗುವುದು ತಡವಾದರೂ ಜುಲೈ ನಂತರ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಭಾಗ ಮತ್ತು ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವೆಬ್‍ಸೈಟ್‍ನಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ