
ಒಸಾಕಾ, ಜೂ. 28-ಉದಯರವಿ ನಾಡು ಜಪಾನಿನ ಒಸಾಕಾದಲ್ಲಿನ ಜಿ-20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಮಾತುಕತೆ ಅತ್ಯಂತ ಫಲಪ್ರದವಾಗಿದೆ.
ಉಭಯ ನಾಯಕರು ವ್ಯಾಪಾರ, ರಕ್ಷಣೆ ಮತ್ತು 5ಜಿ ನೆಟ್ವರ್ಕ್ ಸೇರಿದಂತೆ ಹಲವು ದ್ವಿಪಕ್ಷೀಯ ವಿಚಾರಗಳ ಕುರಿತು ವಿಸ್ತೃತ ಮಾತುಕತೆ ನಡೆಸಿದರು.
ಜಿ-20 ಶೃಂಗಸಭೆಯ ಔಪಚಾರಿಕ ಆರಂಭಕ್ಕೆ ಮುನ್ನ ಈ ಮಾತುಕತೆ ನಡೆಯಿತು. ಇರಾನ್, 5ಜಿ, ದ್ವಿಪಕ್ಷೀಯ ಬಾಂಧವ್ಯಗಳು ಮತ್ತು ರಕ್ಷಣಾ ವಿಚಾರಗಳ ಕುರಿತು ಟ್ರಂಪ್ ಜತೆ ಮಾತುಕತೆ ನಡೆಸಲು ಬಯಸಿದ್ದಾಗಿ ಪ್ರಧಾನಿ ತಿಳಿಸಿದರು.
ಭಾರತದ ಕುರಿತು ಅಧ್ಯಕ್ಷ ಟ್ರಂಪ್ ವ್ಯಕ್ತಪಡಿಸಿದ ಪ್ರೀತಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು. ಇತ್ತೀಚೆಗೆ ಅಮೆರಿಕವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಭಾರತಕ್ಕೆ ಭೇಟಿ ನೀಡಿದ್ದಾಗ ಅಧ್ಯಕ್ಷ ಟ್ರಂಪ್ ನೀಡಿದ್ದ ಪತ್ರವನ್ನು ಹಸ್ತಾಂತರಿಸಿದ್ದರು.
ಮೋದಿಗೆ ಅಭಿನಂದನೆ:
ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಅಧಿಕಾರಕ್ಕೆ ಮರಳಿದ ಪ್ರಧಾನಿ ಮೋದಿಯವರನ್ನು ಟ್ರಂಪ್ ಅಭಿನಂದಿಸಿದರು. ಬಳಿಕ, ಮಿಲಿಟರಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಭಾರತ- ಅಮೆರಿಕ ಜತೆಯಾಗಿ ಕೆಲಸ ಮಾಡಲಿವೆ ಎಂದರು.
ಅದು ಬಹಳ ದೊಡ್ಡ ಗೆಲುವು. ನಿಮಗೆ ಅರ್ಹವಾಗಿಯೇ ಸಂದಿದೆ. ನೀವು ಬಹಳ ದೊಡ್ಡ ಸಾಧನೆ ಮಾಡಿದ್ದೀರಿ. ನಾವು ಇನ್ನು ಹಲವು ವಿಷಯಗಳನ್ನು ಘೋಷಿಸಲಿಕ್ಕಿದ್ದೇವೆ. ವ್ಯಾಪಾರ, ಉತ್ಪಾದನೆ, 5ಜಿ ಸೇರಿದಂತೆ ಹಲವು ವಿಷಯಗಳನ್ನು ವಿಸ್ತಾರವಾಗಿ ಚರ್ಚಿಸಲಿಕ್ಕಿದ್ದೇವೆ. ನಿಮಗೆ ಅಭಿನಂದನೆಗಳು. ನಾವು ಇನ್ನಷ್ಟು ಮುನ್ನೋಟದತ್ತ ಮಾತುಕತೆ ನಡೆಲಿದ್ದೇವೆ ಎಂದು ಟ್ರಂಪ್ ಹೇಳಿದರು.
ಜಪಾನ್-ಅಮೆರಿಕ- ಭಾರತ ತ್ರಿಪಕ್ಷೀಯ ಮಾತುಕತೆ ಬಳಿಕ ಮೋದಿ-ಟ್ರಂಪ್ ಭೇಟಿ ನಡೆಯಿತು. ತ್ರಿಪಕ್ಷೀಯ ಬಾಂಧವ್ಯದ ಅಗತ್ಯದ ಬಗ್ಗೆ ಪ್ರಧಾನಿ ಮೋದಿ ವಿವರಿಸಿದರು.
ಅಮೆರಿಕ ಮೊದಲು ಎಂಬ ನೀತಿ ಅನುಸರಿಸುತ್ತಿರುವ ಟ್ರಂಪ್ ಅಮೆರಿಕದ ಉತ್ಪನ್ನಗಳ ಬಗ್ಗೆ ಭಾರತ ದುಬಾರಿ ತೆರಿಗೆ ವಿಧಿಸುತ್ತಿದೆ ಎಂದು ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಮೋದಿ-ಟ್ರಂಪ್ ಭೇಟಿ ಮತ್ತು ಮಹತ್ವದ ಚರ್ಚೆ ನಡೆಯಿತು.
ಇದೇ ಸಂದರ್ಭದಲ್ಲಿ ಮೋದಿ ಜಪಾನ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಸಹ ವಾಣಿಜ್ಯ ವ್ಯಾಪಾರ ಮತ್ತು ಭವಿಷ್ಯ ಯೋಜನೆಗಳ ಕುರಿತು ಚರ್ಚಿಸಿದರು.
ಜಿ-20ಶೃಂಗಸಭೆಗೂ ಮುನ್ನ ಸೌದಿ ರಾಜಕುಮಾರ್ ಸಲ್ಮಾನ್ ಅವರನ್ನು ಭೇಟಿ ಮಾಡಿ ಮೋದಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಕುರಿತು ಸಮಾಲೋಚಿಸಿದರು.