ವಿಶ್ವದ ಹಲವಾರು ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ

ಬೆಂಗಳೂರು, ಜೂ.28- ಜಲಸಂಪನ್ಮೂಲಗಳ ನಿರ್ವಹಣೆ, ಮೂಲಸೌಲಭ್ಯಗಳ ಅಭಿವೃದ್ಧಿ ಮತ್ತು ಪರಿಸರ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ, ಪರಿಸರ, ಕಾನೂನು ಮತ್ತು ಆಡಳಿತಾತ್ಮಕ ತೊಡಕುಗಳ ನಿವಾರಣೆ ಕುರಿತು ಎನ್ವಿರಾನ್‍ಮೆಂಟ್ ಅಂಡ್ ಪವರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಕರ್ನಾಟಕ ಹಿರಿಯ ಇಂಜಿನಿಯರ್‍ಗಳ ವೇದಿಕೆಯ ಅಧ್ಯಕ್ಷ ಕ್ಯಾಪ್ಟನ್ ಎಸ್.ರಾಜಾರಾವ್ ಅವರು ವಿಸ್ತೃತ ವರದಿಯನ್ನು ತಯಾರಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಂಪತ್ತಿನ ನಾಶ, ಜಾಗತಿಕ ತಾಪಮಾನ ಹೆಚ್ಚಳ, ಜನಸಂಖ್ಯೆ ಹೆಚ್ಚಳ, ಅತಿಯಾದ ಅಂತರ್ಜಲ ಬಳಕೆ, ನಗರೀಕರಣ, ಕೈಗಾರಿಕೀಕರಣ ಮೊದಲಾದ ಕಾರಣಗಳಿಂದಾಗಿ ಭಾರತ ಮಾತ್ರವಲ್ಲದೆ ವಿಶ್ವದ ಹಲವಾರು ದೇಶಗಳಲ್ಲಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಅಂತರ್ಜಲ ಮಟ್ಟ ಪಾತಾಳಕ್ಕಿಳಿದೆ ಅದರಿಂದ ಈ ಸಮಸ್ಯೆಗಳ ನಿರ್ವಹಣೆಗಾಗಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಈ ವರದಿಯಲ್ಲಿ ಭೂಮಿಯ ಮೇಲಿನ ಮತ್ತು ಅಂತರ್ಜಲ ಲಭ್ಯತೆಯನ್ನು ಹೆಚ್ಚಿಸುವುದು, ರೈತರಿಗೆ ನೇರವಾಗಿ ಎದುರಾಗುವ ಸಮಸ್ಯೆಗಳು, ಬರಗಾಲದ ಸಂದರ್ಭದಲ್ಲಿ ಪರಿಹಾರ ಕಲ್ಪಿಸುವುದು, ಸ್ವಚ್ಛ ಭಾರತ ಅಭಿಯಾನದ ವೇಗವರ್ಧನೆಗಾಗಿ ಪರಿಸರ ಸಂಬಂಧಿ ಸಮಸ್ಯೆಗಳಿಗೆ ಸೇರಿದಂತೆ 35 ವಿಷಯಗಳ ಬಗ್ಗೆ ಈ ವರದಿಯಲ್ಲಿ ಸಲಹೆ ನೀಡಲಾಗಿದೆ ಎಂದರು.

ಈ ವರದಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಸಂಬಂಧಿತ ಇಲಾಖೆಗಳ ಕೇಂದ್ರ ರಾಜ್ಯ ಸರ್ಕಾರಗಳ ಮುಖ್ಯಸ್ಥರಿಗೆ ಮತ್ತು ವಿವಿಧ ಸಚಿವರಿಗೆ ಸಲ್ಲಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವುದು, ನದಿಗಳ ಜೋಡಣೆ, ಸ್ವಚ್ಚ ಭಾರತ, ಅಂತರ್ಜಲ ಹೆಚ್ಚಳ, ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಮರುಬಳಕೆ, ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ತಮ್ಮ ಈ ಸಲಹೆಗಳು ಸರ್ಕಾರ ಅಳವಡಿಸಿಕೊಂಡರೆ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಈ 35 ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಐದು ವರ್ಷಗಳಲ್ಲಿ ಪ್ರತಿವರ್ಷವೂ ರಾಜ್ಯ ಸರ್ಕಾರಗಳಿಗೆ ಸೂಕ್ತ ಅನುದಾನ ಒದಗಿಸಿದಲ್ಲಿ ಪ್ರಧಾನಮಂತ್ರಿಯವರ ಕನಸು ನನಸಾಗಲಿದೆ ಎಂದರು.

ನೀರನ್ನು ಸಂರಕ್ಷಣೆ ಮಾಡುವ ಕಡೆಗೆ ನಾವೆಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ