ಬೆಂಗಳೂರು, ಜೂ.28- ಅಧಿಕ ಬಡ್ಡಿಯ ಆಸೆ ತೋರಿಸಿ ಸಾವಿರಾರು ಜನರಿಗೆ ವಂಚಿಸಿ ಸದ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಐಎಂಎ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ಗೆ ಸೇರಿದ 209ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಇಂದು ವಶ ಪಡಿಸಿಕೊಂಡಿದೆ.
ಈ ಮೂಲಕ ಐಎಂಎ ವಂಚನೆ ಪ್ರಕರಣದಲ್ಲಿ ಇಡಿ ಅಧಿಕೃತವಾಗಿ ರಂಗಪ್ರವೇಶ ಮಾಡಿದ್ದು, ಬೇನಾಮಿ ವಹಿವಾಟು, ಹವಾಲಾ ದಂಧೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಐಎಂಎ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸುಮಾರು 40ಸಾವಿರ ಹೂಡಿಕೆದಾರರಿಗೆ ವಂಚನೆ ಮಾಡಿರುವ ಐಎಂಎ ವ್ಯವಸ್ಥಾಪಕ ನಿರ್ದೇಶಕ ಖಾನ್ಗೆ ಸೇರಿದ 209ಕೋಟಿ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಇದರಲ್ಲಿ 197ಕೋಟಿ ಚಿರಾಸ್ತಿ ಹಾಗೂ 12ಕೋಟಿ ನಗದು ಸೇರಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ದಾವಣಗೆರೆ, ಕಲಬುರ್ಗಿ, ಮೈಸೂರು, ಕೇರಳ, ನವದೆಹಲಿ ಸೇರಿದಂತೆ ದೇಶದ ಐಎಂಎ ಶಾಖೆಗೆ ಸೇರಿದ್ದ ನಗದು, ಬಂಗಾರ, ವಜ್ರ, ಕಟ್ಟಡಗಳು, ನಿವಾಸ, ಮನೆಗಳು, ಸಂಬಂಧಿಕರ ಬ್ಯಾಂಕ್ ಖಾತೆಗಳು, ಠೇವಣಿ ಸೇರಿದಂತೆ ಮಹ್ಮಮದ್ ಮನ್ಸೂರ್ ಖಾನ್ ಹೆಸರಿನಲ್ಲಿದ್ದ 130 ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮನ್ಸೂರ್ ಖಾನ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ವಂಚಕ ಮನ್ಸೂರ್ ಖಾನ್ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಐಡಿ ಇಂಟರ್ ಪೋಲ್ಗೂ ಪ್ರಸ್ತಾವನೆ ಸಲ್ಲಿಸಿದೆ.
ಬಹುಕೋಟಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಹಣ ಕಳೆದುಕೊಂಡವರಿಗೆ ನ್ಯಾಯ ಕಲ್ಪಿಸುವ ಭರವಸೆ ನೀಡಿದೆ.ಅಲ್ಲದೇ ಪ್ರಕರಣದ ತನಿಖೆಯನ್ನು ಎಸ್ಐಟಿ ವಶಕ್ಕೆ ನೀಡಿದೆ.
ಇದೇ ವೇಳೆ ಐಎಂಎ ಕಂಪನಿಯ ಬ್ಯಾಂಕ್ ಖಾತೆಗಳಲ್ಲಿ ವಿದೇಶಿ ವಿನಿಮಯ ಕೂಡ ನಡೆದಿದೆ ಎಂಬ ಅಂಶ ಪತ್ತೆ ಹಚ್ಚಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಹ ಈ ಪ್ರಕರಣದ ಬೆನ್ನತ್ತಿದ್ದಾರೆ.
ಹೀಗಾಗಿಯೇ ಐಎಂಎ ಸಂಸ್ಥೆಯ 7 ಜನ ಪ್ರಮುಖ ನಿರ್ದೇಶಕರನ್ನು ವಶಕ್ಕೆ ಪಡೆದು ಎಸ್ಐಟಿ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ನಿರ್ದೇಶಕರು ಜಯನಗರ ಹಾಗೂ ಶಿವಾಜಿನಗರ ಜ್ಯುವೆಲರಿಗಳಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಡೈಮಂಡ್ ಇದೆ ಎಂದು ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ಎರಡೂ ಇಲಾಖೆಯ ಅಧಿಕಾರಿಗಳು ಜೂನ್.18 ರಂದು ಜಯನಗರ ಜ್ಯುವೆಲರಿ ಶಾಖೆ ಹಾಗೂ ಮನ್ಸೂರ್ ಖಾನ್ ಮೂರನೇ ವಿಚ್ಚೇಧಿತ ಪತ್ನಿ ಮನೆಯನ್ನು ಶೋಧನೆಗೆ ಒಳಪಡಿಸಿದ್ದರು.
ಈ ವೇಳೆ ಜ್ಯುವೆಲರಿಯಲ್ಲಿ 13 ಕೋಟಿ ಮೌಲ್ಯದ 43 ಕೆಜಿ ಚಿನ್ನ. 17 ಕೋಟಿ ಮೌಲ್ಯದ 5864 ಕ್ಯಾರೆಟ್ ಡೈಮಂಡ್, 1.5 ಕೋಟಿ ಮೌಲ್ಯದ 520 ಕೆಜಿ ಬೆಳ್ಳಿ ಹಾಗೂ 1.5 ಕೋಟಿ ಮೌಲ್ಯದ ಸೈಲ್ಟರ್ ಡೈಮಂಡ್ ಪತ್ತೆಯಾಗಿತ್ತು. ಇನ್ನೂ ಪತ್ನಿ ಮನೆಯಲ್ಲಿ 39 ಲಕ್ಷ ಮೌಲ್ಯದ 1.5 ಕೆಜಿ ಚಿನ್ನ ಹಾಗೂ 2.5 ಲಕ್ಷ ನಗದು ಪತ್ತೆಯಾಗಿತ್ತು.
ಎರಡು ವಾರಗಳಿಂದ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖೆ ತಂಡ(ಎಸ್ಐಟಿ) ಐಎಂಎಗೆ ಸೇರಿದ ಆಸ್ತಿ-ಪಾಸ್ತಿಯನ್ನು ವಶ ಪಡಿಸಿಕೊಂಡಿತ್ತು. ಇದೀಗ ಇಡಿ ಈಗ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವುದರಿಂದ ಆತನ ಆಸ್ತಿಯನ್ನು ವಶಕ್ಕೆ ಪಡೆದಿದೆ.
ಕಳೆದ ಎರಡುವಾರಗಳ ಹಿಂದೆ ರಹಸ್ಯ ಸ್ಥಳವೊಂದರಲ್ಲಿ ಮನ್ಸೂರ್ ಖಾನ್ ಎರಡನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ.ಇದರಲ್ಲಿ ತನಗೆ ಯಾರ್ಯಾರು ವಂಚನೆ ಮಾಡಿದ್ದಾರೆ. ತಾನು ಏಕೆ ದೇಶ ತೊರೆಯಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದ, ಶೀಘ್ರದಲ್ಲೇ ಬೆಂಗಳೂರಿಗೆ ಬರುತ್ತೇನೆ. ನನ್ನ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವವರು ಆತಂಕಕ್ಕೆ ಒಳಗಾಗಬಾರದು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ಕುಮಾರ್ ಸೂಕ್ತ ರಕ್ಷಣೆ ಒದಗಿಸಿದರೆ ಬರುತ್ತೇನೆ. ನಾನು ಭಾರತಕ್ಕೆ ಬಂದರೆ ಹೂಡಿಕೆದಾರರು ನನ್ನ ಕುಟುಂಬವನ್ನು ಜೀವ ಸಮೇತ ಬಿಡುವುದಿಲ್ಲ ಎಂದು ಖಾನ್ ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾನೆ.