ಬೆಂಗಳೂರು [ಜೂ.28 ] : ರಾಜಧಾನಿ ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಸಿಕ್ಕಿಬಿದ್ದ ಶಂಕಿತ ಜಮಾತ್-ಉಲ್-ಮುಜಾಹಿದೀನ್-ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಹಬೀಬುರ್ ರೆಹಮಾನ್ ಕೇರಳಕ್ಕೆ ಸ್ಫೋಟಕಗಳನ್ನು ಸಾಗಿಸಿರುವ ಬಗ್ಗೆ ಎನ್ಐಎ ಬಲವಾದ ಅನುಮಾನ ವ್ಯಕ್ತಪಡಿಸಿದೆ.
ಒಂದು ವರ್ಷದ ಹಿಂದೆ ರಾಮನಗರದಲ್ಲಿ ಸೆರೆ ಸಿಕ್ಕ ಬಿಹಾರದ ಬೋಧಗಯಾ ಮಂದಿರದ ಸ್ಫೋಟದ ‘ಮಾಸ್ಟರ್ ಮೈಂಡ್’ ಜೈದುಲ್ ಇಸ್ಲಾಮ್ ಅಲಿಯಾಸ್ ಮುನೀರ್ ಶೇಖ್ ರೆಹಮಾನ್ನನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ನೇಮಿಸಿದ್ದ. ಜೈದುಲ್ ಇಸ್ಲಾಮ್ನ ಅಣತಿಯಂತೆ ರೆಹಮಾನ್ ನಡೆದುಕೊಳ್ಳುತ್ತಿದ್ದ. ಜೈದುಲ್ ಬಂಧನದ ಬಳಿಕ ರೆಹಮಾನ್ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೆಲೆ ಬದಲಿಸುತ್ತಿದ್ದ.
ಬಾಂಬ್ ತಯಾರಿಸುವುದರಲ್ಲಿ ನಿಷ್ಣಾತನಾಗಿದ್ದ ಮುನೀರ್, ಬೆಂಗಳೂರಿನ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯ ಶಿಕಾರಿಪಾಳ್ಯ ಹಾಗೂ ಬೇಗೂರಿನ ಬಾಡಿಗೆ ಮನೆಯಲ್ಲಿ ರೆಹಮಾನ್ಗೆ ಬಾಂಬ್ ತಯಾರಿಕೆ ಬಗ್ಗೆ ಹೇಳಿಕೊಟ್ಟಿದ್ದ. ಜೈದುಲ್ನಿಂದ ರೆಹಮಾನ್ ಕೇರಳದಲ್ಲಿದ್ದ ಉಗ್ರನನೊಬ್ಬನ ಸಂಪರ್ಕಕ್ಕೆ ಬಂದಿದ್ದ. ಕೇರಳ ಮೂಲದ ವ್ಯಕ್ತಿಯ ಸೂಚನೆ ಮೇರೆಗೆ ಸುಧಾರಿತ ಸ್ಫೋಟಕ ವಸ್ತುಗಳನ್ನು ತಯಾರಿಸಿಕೊಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೆ, ಎನ್ಐಎ ಕೈಗೆ ಸಿಕ್ಕಿಬೀಳುತ್ತೇನೆಂದು ಕೇರಳ ಹಾಗೂ ಉತ್ತರ ಭಾರತದ ಕೆಲ ರಾಜ್ಯಗಳಿಗೆ ತೆರಳಿ ಈ ಮೊದಲೇ ರೆಹಮಾನ್ ತಲೆಮರೆಸಿಕೊಂಡಿದ್ದ.
ಕೇರಳದಲ್ಲಿ ಕೆಲ ತಿಂಗಳು ಉಳಿದುಕೊಂಡಿದ್ದ. ಆ ವೇಳೆಯಲ್ಲೂ ಸುಧಾರಿತ ಸ್ಫೋಟಕ ವಸ್ತುಗಳನ್ನು ತಯಾರಿಸಿಕೊಟ್ಟಿರುವ ಸಾಧ್ಯತೆ ಇದೆ. ಈತನಿಂದ ಸ್ಫೋಟಕ ವಸ್ತುಗಳನ್ನು ಯಾರು ಪಡೆದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಗತ್ಯಬಿದ್ದರೆ ಕಳೆದ ವರ್ಷ ಬಂಧನಕ್ಕೆ ಒಳಗಾಗಿರುವ ಜೈದುಲ್ ಇಸ್ಲಾಮ್ನನ್ನು ಮುಖಾಮುಖಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಶಂಕಿತ ಉಗ್ರರು ಸ್ಥಳೀಯವಾಗಿ ಸ್ಫೋಟಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಯೊಬ್ಬರು
ಮಾಹಿತಿ ನೀಡಿದ್ದಾರೆ
ದೊಡ್ಡಬಳ್ಳಾಪುರದ ಮೌಲ್ವಿ ವಿಚಾರಣೆ:
ಇನ್ನು ಮಸೀದಿಯಲ್ಲಿ ಸೆರೆ ಸಿಕ್ಕ ರೆಹಮಾನ್ಗೆ ಕೆಲ ದಿನಗಳಿಂದ ಮೌಲ್ವಿಯೊಬ್ಬರು ಆಶ್ರಯ ನೀಡಿದ್ದರು. ಅಲ್ಲದೆ, ರೆಹಮಾನ್ ಪತ್ನಿಗೆ ಮೌಲ್ವಿಯೇ ಹೆರಿಗೆ ಮಾಡಿಸಿದ್ದರು ಎನ್ನಲಾಗಿದೆ. ಹೀಗಾಗಲೇ ಮೌಲ್ವಿಯನ್ನು ವಿಚಾರಣೆ ನಡೆಸಿದ್ದು, ತನಗೆ ರೆಹಮಾನ್ ಎಂಬಾತ ಮಸೀದಿಯಲ್ಲಿ ಉಳಿದುಕೊಂಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಆತ ದೊಡ್ಡಬಳ್ಳಾಪುರದಲ್ಲಿನ ಮಸೀದಿಯಲ್ಲಿ ಆಶ್ರಯ ಪಡೆಯಲು ಹೇಗೆ ಸಾಧ್ಯವಾಯಿತು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪ್ರಾರ್ಥನಾ ಮಂದಿರದಲ್ಲಿ ಆಶ್ರಯ ಪಡೆದಿದ್ದ ರೆಹಮಾನ್ನನ್ನು ಎನ್ಐಎ ತಂಡ ಜೂ.25ರಂದು ಬಂಧಿಸಿತ್ತು. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಕೊಲ್ಕತ್ತಾಗೆ ಕರೆದೊಯ್ಯಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಜೆಎಂಬಿ ನಂಟು ಹೇಗೆ?
2006ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಜೈದುಲ್ 2009ರಲ್ಲಿ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. 2013ರಲ್ಲಿ ಬಾಂಗ್ಲಾ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಅಕ್ರಮವಾಗಿ ಪಶ್ವಿಮ ಬಂಗಾಳಕ್ಕೆ ಬಂದು ನೆಲೆಸಿದ್ದ. 2013ರಲ್ಲಿ ರೆಹಮಾನ್ನ ನಾದಿನಿಯನ್ನು (ಪತ್ನಿಯ ಸಹೋದರಿ) ಪ್ರೀತಿಸಿ ವಿವಾಹವಾಗಿದ್ದ. ಹೀಗೆ ರೆಹಮಾನ್, ಜೈದುಲ್ ಮೂಲಕ ಜೆಎಂಬಿ ಸಂಪರ್ಕಕ್ಕೆ ಬಂದಿದ್ದ. ನಂತರ 2014ರಲ್ಲಿ ಪಶ್ವಿಮ ಬಂಗಾಳದ ಬುದ್ರ್ವಾನ್ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಹಬೀಬುರ್ ತಲೆಮರೆಸಿಕೊಂಡಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಆರೋಪಿ ಹಬಿಬುಲ್ಲಾ ರೆಹಮಾನ್ ವಾಸವಿದ್ದ ಮನೆ