ನವದೆಹಲಿ, ಜೂ. 28- ಜಮ್ಮು ಕಾಶ್ಮೀರದಲ್ಲಿ ಇನ್ನೂ 6 ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ಮುಂದುವರೆಸಬೇಕೆಂದು ಕೋರಿ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿಂದು ಶಾಸನ ಬದ್ಧ ನಿರ್ಣಯ ಮಂಡಿಸಿದರು.
ಕಣಿವೆ ರಾಜ್ಯದಲ್ಲಿ ವಿಧಾನ ಸಭೆ ವಿರ್ಸಜಿಸಲಾಗಿದೆ. ಮೊದಲು ಅಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು. ನಂತರ ರಾಷ್ಟ್ರಪತಿ ಆಡಳಿತ ನಿಯಂತ್ರಿಸಲಾಗಿತ್ತು. ಕೇಂದ್ರ ಚುನಾವಣಾ ಆಯೋಗ ಈ ವರ್ಷಾಂತ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜು. 1ರಿಂದ ಬರುವಂತೆ ರಾಷ್ಟ್ರಪತಿ ಆಳ್ವಿಕೆ ಮುಂದುವರೆಸಬೇಕೆಂದು ಶಾ ಗೊತ್ತುವಳಿಯಲ್ಲಿ ಕೋರಿದ್ದಾರೆ.
ನಿರ್ಣಯ ಮಂಡಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ ಸಾಕಷ್ಟು ಬದಲಾವಣೆ ಕಂಡು ಬಂದಿದೆ. ಸರ್ಕಾರ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಅವರನ್ನು ನಿಗ್ರಹಿಸುವ ಕಾರ್ಯಾಚರಣೆ ಮುಂದುವರೆಸಿದೆ ಎಂದರು.
ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಮುನ್ನ ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಸಾಕಷ್ಟು ಹಿಂಸಾಚಾರ ಮತ್ತು ರಕ್ತಪಾತ ನಡೆದಿತ್ತು. ರಾಷ್ಟ್ರಪತಿ ಆಡಳಿತ ವಿಧಿಸಿದ ನಂತರ ಅಲ್ಲಿ ಸಾಕಷ್ಟು ಬದಲಾವಣೆ ಗೋಚರಿಸಿದೆ ಎಂದು ಶಾ ತಿಳಿಸಿದರು.
ಜಮ್ಮುಕಾಶ್ಮೀರ ಜನತೆ ಹಿತದೃಷ್ಟಿಯಿಂದ ನಾವು ಮಂಡಿಸಿರುವ ನಿರ್ಣಯಕ್ಕೆ ಗೊತ್ತುವಳಿಗೆ ಎಲ್ಲರೂ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.