ಬೆಂಗಳೂರು,ಜೂ.27-ವಿದ್ಯಾರ್ಥಿಗಳ ರಿಯಾಯ್ತಿ ಬಸ್ಪಾಸ್ಗೆ ಸರ್ಕಾರದಿಂದ ಬಿಡಗುಡೆಯಾಗಬೇಕಿರುವ 2500 ಕೋಟಿ ರೂ.ಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ರಾಜ್ಯಾದ್ಯಂತ ಇರುವ 4 ಸಾರಿಗೆ ನಿಗಮಗಳನ್ನು ವಿಲೀನ ಮಾಡಿ ಒಂದೇ ನಿಗಮವನ್ನು ರಚಿಸಬೇಕು ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಒತ್ತಾಯಿಸಿದೆ.
ಪರಮೇಶ್ವರ್ ಅವರನ್ನು ಇಂದು ಭೇಟಿ ಮಾಡಿದ ಫೆಡರೇಷನ್ ನಿಯೋಗ ಮನವಿ ನೀಡಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಂಗಳೂರು ಚಲೋ ನಡೆಸಲಾಗಿದೆ. ಸಾರಿಗೆ ನಿಗಮಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿವೆ. ಅವುಗಳಿಗೆ ಕಡಿವಾಣ ಹಾಕಿ ನಾಲ್ಕು ನಿಗಮಗಳನ್ನು ಒಂದೇ ಮಾಡಿ ಅನಗತ್ಯವೆಚ್ಚವನ್ನು ಕಡಿಮೆ ಮಾಡಿ ಸಿಬ್ಬಂದಿಗಳಿಗೆ ಸಿಗಬೇಕಾದ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡಿ.
ಕಾರ್ಮಿಕರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಿ, ವಾರದ ರಜೆ ಕಡಿತ ಮಾಡುವುದನ್ನು ನಿಲ್ಲಿಸಿ, ನೌಕರರ ಆತ್ಮಹತ್ಯೆ ಪ್ರಕರಣಗಳಿಗೆ 25 ಲಕ್ಷ ರೂ. ಪರಿಹಾರ ನೀಡಿ, ಆತ್ಮಹತ್ಯೆಗೆ ಪ್ರೇರಣೆ ನೀಡುವಂತಹ ಕಿರುಕುಳ ನೀಡುವ ಅಧಿಕಾರಿಗಳನ್ನು ಶಿಕ್ಷಿಸಿ ಎಂದು ಫೆಡರೇಷನ್ ಒತ್ತಾಯಿಸಿದೆ. ಫೆಡರೇಷನ್ನ ಪ್ರ.ಕಾರ್ಯದರ್ಶಿ ಅನಂತಸುಬ್ಬರಾವ್ ನೇತೃತ್ವದಲ್ಲಿ ನಿಯೋಗ ಒತ್ತಾಯಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು, ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯದಲ್ಲಿದ್ದಾರೆ. ಅವರು ಬಂದ ಬಳಿಕ ಸಾರಿಗೆ ಸಚಿವರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.