ಬೆಂಗಳೂರು, ಜೂ.27- ಕಸ ವಿಲೇವಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಕಮಿಷನರ್ ನಡುವೆ ಜಂಗೀ ಕುಸ್ತಿ ಆರಂಭವಾಗಿದೆ.
ಹಸಿ ಮತ್ತು ಕಸ ವಿಲೇವಾರಿಗೆ ಪ್ರತ್ಯೇಕ ಗುತ್ತಿಗೆ ನೀಡುವ ಅವಶ್ಯಕತೆ ಇದೆ ಎನ್ನುವುದು ಕಮಿಷನರ್ ಮಂಜುನಾಥ್ ಪ್ರಸಾದ್ ಅವರ ಅಭಿಪ್ರಾಯವಾಗಿದ್ದರೆ, ಮೇಯರ್ ಗಂಗಾಂಬಿಕೆ ಮತ್ತು ಬಹುತೇಕ ಬಿಬಿಎಂಪಿ ಸದಸ್ಯರು ಪ್ರತ್ಯೇಕ ಗುತ್ತಿಗೆ ನೀಡುವ ಬದಲು ಏಕ ಗುತ್ತಿಗೆ ನೀಡಬೇಕು ಎನ್ನುತ್ತಾರೆ.
ಜನಪ್ರತಿನಿಧಿಗಳು ಮತ್ತು ಕಮಿಷನರ್ ನಡುವಿನ ಜಂಗೀ ಕುಸ್ತಿಯಿಂದ ಕಸ ವಿಲೇವಾರಿ ಗುತ್ತಿಗೆ ನೀಡುವ ವಿಚಾರ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಹಸಿ ಮತ್ತು ಕಸ ವಿಲೇವಾರಿಗೆ ಪ್ರತ್ಯೇಕ ಗುತ್ತಿಗೆ ನೀಡಿದರೆ ಪ್ರತಿ ನಿತ್ಯ ಹಸಿ ಕಸವನ್ನು ಮಾತ್ರ ಸಂಗ್ರಹ ಮಾಡಲಾಗುವುದು. ಒಣ ಕಸ ವಿಲೇವಾರಿ ಮಾಡುವ ಗುತ್ತಿಗೆದಾರ ಯಾವ ಸಮಯದಲ್ಲಿ ಒಣ ಕಸ ಸಾಗಿಸುತ್ತಾನೋ ಎಂಬ ಬಗ್ಗೆ ನಿರ್ದಿಷ್ಟ ಮಾನದಂಡವಿಲ್ಲ.
ಹೀಗಾಗಿ ಏಕ ಗುತ್ತಿಗೆ ನೀಡಿದರೆ ಹಸಿ ಕಸ ಸಾಗಿಸುವ ಗುತ್ತಿಗೆದಾರನೇ ಪ್ರತಿ ನಿತ್ಯ ಒಣ ಕಸವನ್ನು ಪ್ರತ್ಯೇಕವಾಗಿ ಸಾಗಿಸುತ್ತಾನೆ. ಹೀಗಾಗಿ ಸಮಸ್ಯೆಗೆ ಸುಲಭ ಪರಿಹಾರ ಕಂಡು ಕೊಳ್ಳಬಹುದು. ಇದರಿಂದ ಏಕ ಗುತ್ತಿಗೆ ನೀಡುವುದೇ ಸಮಂಜಸ ಎಂಬ ನಿಲುವಿಗೆ ಮೇಯರ್ ಗಂಗಾಂಬಿಕೆ ಬಂದಿದ್ದಾರೆ.
ಆದರೆ ಮೇಯರ್ ಅವರ ಈ ನಿರ್ಧಾರಕ್ಕೆ ಸೊಪ್ಪು ಹಾಕದ ಕಮಿಷನರ್ ಮಂಜುನಾಥ ಪ್ರಸಾದ್ ಅವರು ನ್ಯಾಯಾಲಯದ ಆದೇಶದಂತೆ ಹಸಿ ಮತ್ತು ಒಣ ಕಸ ಸಾಗಿಸಲು ಪ್ರತ್ಯೇಕ ಗುತ್ತಿಗೆ ಕರೆಯುವುದೇ ಸೂಕ್ತ ಎಂದು ಸಬೂಬು ಹೇಳುತ್ತಿದ್ದಾರೆ.
ಹಸಿ ಕಸ ತೆಗೆಯುವ ಹೊಣೆಯನ್ನು ಗುತ್ತಿಗೆದಾರರಿಗೆ ವಹಿಸಿ , ಒಣ ಕಸ ತೆಗೆಯುವ ಹೊಣೆಯನ್ನು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲು ಮುಂದಾಗಿದ್ದಾರೆ.
ಆಯುಕ್ತರ ಈ ನಿರ್ಧಾರದ ವಿರುದ್ಧ ಜನಪ್ರತಿನಿಧಿಗಳು ಸಿಡಿದೆದ್ದು ನಿನ್ನೆ ಕಸ ವಿಲೇವಾರಿ ಕುರಿತಂತೆ ಚರ್ಚಿಸಲು ಸಭೆ ಕರೆದಿದ್ದರು. ಆದರೆ ಈ ಸಭೆಗೆ ಕ್ಯಾರೆ ಎನ್ನದ ಆಯುಕ್ತ ಮಂಜುನಾಥ ಪ್ರಸಾದ್ ಗೈರು ಹಾಜರಾಗುವ ಮೂಲಕ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದಿದ್ದಾರೆ.
ಆಯುಕ್ತರ ಈ ಧೋರಣೆಯಿಂದ ಜನಪ್ರತಿನಿಧಿಗಳು ರೋಸಿ ಹೋಗಿದ್ದು , ನಾಳೆ ನಡೆಯಲಿರುವ ಪಾಲಿಕೆ ಸಭೆಯಲ್ಲಿ ಮಂಜುನಾಥ್ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.