ಅಮರಾವತಿ, ಜೂ. 28- ಮುಖ್ಯಮಂತ್ರಿಯಾಗಿದ್ದ ತೆಲುಗುದೇಶಂ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ಅಧಿಕಾರಾವಧಿಯಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ಸಾರಿರುವ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತೊಂದು ಸುತ್ತಿನ ಧ್ವಂಸ ಕಾರ್ಯಾಚರಣೆಗೆ ಅಣಿಯಾಗುತ್ತಿದ್ದಾರೆ.
ನಾಯ್ಡು ಅಧಿಕಾರಾವಧಿಯಲ್ಲಿ ತಲೆಯತ್ತಿದ್ದ ಪ್ರಜಾ ವೇದಿಕೆ ಕಟ್ಟಡವನ್ನು ಸಂಪೂರ್ಣ ಧ್ವಂಸಗೊಳಿಸಿದ ನಂತರ ಜಗನ್ ಸೂಚನೆ ಮೇರೆಗೆ ರಾಜಧಾನಿ ಪ್ರಾಂತ್ಯ ಅಭಿವೃದ್ಧಿ ಪ್ರಾಧಿಕಾರದ ಕಣ್ಣು ಈಗ ಚಂದ್ರಬಾಬು ನಾಯ್ಡು ಬಂಗಲೆ ಮೇಲೆ ಬಿದ್ದಿದೆ.
ಅಮರಾವತಿಯ ಇಂದುವಲ್ಲಿ ಪ್ರದೇಶದಲ್ಲಿ ಕೃಷ್ಣಾ ನದಿ ತಟದಲ್ಲಿರುವ ನಾಯ್ಡು ಅವರ ಭವ್ಯಬಂಗಲೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ಇಂದು ಬೆಳಿಗ್ಗೆ ಆಂಧ್ರಪ್ರದೇಶ ರಾಜಧಾನಿ ಪ್ರಾಂತ್ಯ ಅಭಿವೃದ್ಧಿ ಪ್ರಾಧಿಕಾರ (ಎಪಿಸಿಆರ್ಡಿಎ) ಚಂದ್ರಬಾಬು ನಾಯ್ಡು ಅವರ ಬಂಗಲೆಗೆ ತೆರಳಿ ನೋಟಿಸ್ ಜಾರಿಗೊಳಿಸಿದೆ.
ಪ್ರಾಧಿಕಾರದ ಉನ್ನತಾಧಿಕಾರಿ ನರೇಂದ್ರ ರೆಡ್ಡಿ ನೇತೃತ್ವದ ತಂಡ ನಾಯ್ಡು ಅವರ ಬಂಗಲೆಗೆ ತೆರಳಿ ನಾಯ್ಡು ಅಧಿಕಾರಿಗಳಿಗೆ ತೆರವು ನೋಟಿಸ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಾಯ್ಡು ಅವರು ಬಂಗಲೆ ಅಲ್ಲೇ ಇದ್ದರು.
ಕೃಷ್ಣಾ ನದಿ ದಂಡೆಯ ಸುಮಾರು 10 ಅಡಿಗಳಿಗೂ ಹೆಚ್ಚು ಸ್ಥಳವನ್ನು ಈ ಬಂಗಲೆ ಒತ್ತುವರಿ ಮಾಡಿಕೊಂಡಿದೆ. ಅಲ್ಲದೆ ಕಾನೂನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಬಂಗಲೆ ಭಾಗವನ್ನು ಕೆಡವಲಾಗುತ್ತದೆ ಎಂದು ಸೂಚನೆ ನೀಡಿದೆ.
ಪ್ರಜಾ ವೇದಿಕೆ ಕಟ್ಟಡ ಧ್ವಂಸದಿಂದ ಕೆಂಡಾಮಂಡಲಾಗಿರುವ ಟಿಡಿಪಿ ಪರಮೋಚ್ಛ ನಾಯಕ ರೆಡ್ಡಿ ಈಗ ಧ್ವಂಸ ಕಾರ್ಯಾಚರಣೆ ತಮ್ಮ ಮನೆ ಬಾಗಿಲಗೆ ಬಂದಿರುವುದರಿಂದ ಮುಖ್ಯಮಂತ್ರಿ ಜಗನ್ ಮೇಲೆ ಮತ್ತಷ್ಟು ಕುಪಿತರಾಗಿದ್ದಾರೆ.