ಬೆಂಗಳೂರು,ಜೂ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ಸಂಘಟನೆ ಮಾಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಈ ವಿಷಯವಾಗಿ ಚರ್ಚೆ ಮಾಡಿದರೆ ನಾವು ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಹಿಂದ ಸಂಘಟನೆ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಿದ್ದರಾಮಯ್ಯನವರು ಚರ್ಚೆ ಮಾಡಿಲ್ಲ. ಅಂತಹ ಸಂದರ್ಭ ಎದುರಾದಾಗ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದಿಲ್ಲ . ಸಮ್ಮಿಶ್ರ ಸರ್ಕಾರ ಅವಧಿಯನ್ನು ಪೂರ್ಣಗೊಳಿಸುತ್ತದೆ. ಎಲ್ಲರೂ ಸರ್ಕಾರದ ಬಗ್ಗೆತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಿದ್ದಾರೆ, ನಾನು ವೈಯಕ್ತಿಕವಾಗಿ ಹೇಳುವುದಾದರೆ ಜನರಿಗೆ ಭರವಸೆ ಕೊಟ್ಟಂತೆ ಕೊಟ್ಟ ಆಡಳಿತ ನಡೆಸುತ್ತೇವೆ ಎಂದರು.
ಶಾಸಕ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಪರ, ವಿರೋಧ ಚರ್ಚೆಗಳಿವೆ. ರೋಷನ್ ಬೇಗ್ ವಿರುದ್ದ ಕ್ರಮ ಕೈಗೊಳಬಾರದಿತ್ತು ಎಂದು ಕೆಲವರು ಹೇಳುತ್ತಾರೆ, ಸರಿ ಎಂದು ಇನ್ನು ಕೆಲವರು ಹೇಳುತ್ತಾರೆ. ಅದೇ ರೀತಿ ಪಕ್ಷದ ಶಿಸ್ತು ಉಲ್ಲಂಘಿಸಿದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಬಹಳಷ್ಟು ಮಂದಿ ವಿರುದ್ಧ ದೂರುಗಳು ಬಂದಿವೆ. ನಿನ್ನೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ನ ಅಭ್ಯರ್ಥಿಗಳ ಸಭೆಯಲ್ಲಿ ವಿಸ್ತೃತವಾಗಿ ದೂರು ನೀಡಲಾಗಿದೆ. ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು.
ಸಿಎಂ ಗ್ರಾಮವಾಸ್ತವ್ಯಕ್ಕೆ ಕೆಲವು ಟೀಕೆ ಮಾಡುತ್ತಾರೆ. ಗ್ರಾಮವಾಸ್ತವ್ಯದಿಂದ ಜನರಿಗೆ ಅನುಕೂಲವಾಗುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಎಲ್ಲರಿಗೂ ತಮ್ಮದೇ ಆದ ಮಾರ್ಗಗಳಿರುತ್ತವೆ. ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸಚಿವರು, ಶಾಸಕರು ಕೂಡ ಗ್ರಾಮವಾಸ್ತವ್ಯ ಮಾಡುವಂತೆ ಸಲಹೆ ನೀಡುತ್ತೇವೆ. ನಾನು ವಿಧಾನಸಭೆ ಚುನಾವಣೆಗೆ ಮೊದಲು ಕೊರಟಗೆರೆ ಕ್ಷೇತ್ರದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದೆ. ಈಗ ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ. ಅದನ್ನು ಇನ್ನಷ್ಟು ಮುಂದುವರೆಸುತ್ತೇವೆ ಎಂದರು.
ಬೆಂಗಳೂರಿನಲ್ಲಿ ಜನರ ಸಮಸ್ಯೆಅರಿಯಲು ಶನಿವಾರ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿಯವರು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಅದು ಅವರು ಆಯ್ದುಕೊಂಡ ಮಾರ್ಗ. ವಿಧಾನಸೌಧದಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ಪಾದಯಾತ್ರೆ ಯಾಕೆ ಮಾಡುತ್ತೀರಾ ಎಂದು ಪ್ರಶ್ನಿಸಲಾಗುತ್ತದೆಯೇ? ಎಂದು ಪರಮೇಶ್ ಹೇಳಿದರು.