ನವ ದೆಹಲಿ; ಲೋಕಸಭಾ ಚುನಾವಣೆಯ ನಂತರ ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದ್ದ ಕೇಂದ್ರ ಸರ್ಕಾರ ಇದೀಗ ಆಹಾರ ಸಂರಕ್ಷಣೆಗಾಗಿ ಒಂದು ದೇಶ, ಒಂದೇ ಪಡಿತರ ಚೀಟಿ (ರೇಷನ್ ಕಾರ್ಡ್) ಯೋಜನೆ ಬಗ್ಗೆ ಆಸಕ್ತಿವಹಿಸಿದೆ ಎಂದು ತಿಳಿದುಬಂದಿದೆ.
ಗುರುವಾರ ಈ ಕುರಿತು ಮಾಹಿತಿ ನೀಡಿರುವ ಆಹಾರ, ಗ್ರಾಹಕ ವ್ಯವಹಾರ ಮತ್ತು ವಿತರಣಾ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, “ದೇಶದಾದ್ಯಂತ ಆಹಾರ ಸಂರಕ್ಷಣೆಗಾಗಿ ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ” ಎಂದು ಮಾಹಿತಿ ನೀಡಿದ್ದಾರೆ.
ಆಹಾರ ಸಂರಕ್ಷಣೆ ಕುರಿತು ಚರ್ಚಿಸಲು ಗುರುವಾರ ಸಂಜೆ ರಾಜಧಾನಿ ದೆಹಲಿಯಲ್ಲಿ ರಾಜ್ಯ ಆಹಾರ ಇಲಾಖೆ ಕಾರ್ಯದರ್ಶಿಗಳ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, “ಒಂದು ದೇಶ ಒಂದೇ ಪಡಿತರ ಚೀಟಿ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು. ಈ ಮೂಲಕ ಜನ ಸಾಮಾನ್ಯರು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದು.
ಈ ಯೋಜನೆಯಿಂದ ಜನ ಕೇವಲ ನ್ಯಾಯಬೆಲೆ ಅಂಗಡಿಯಿಂದ ಮಾತ್ರ ವಸ್ತುಗಳನ್ನು ಖರೀದಿಸುವ ಅವಶ್ಯಕತೆ ಇಲ್ಲ ಹಾಗೂ ಈ ಮೂಲಕ ದೇಶದಾದ್ಯಂತ ಆಹಾರ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಬಹುದು” ಎಂದು ಅವರು ತಿಳಿಸಿದ್ದಾರೆ.
ಕೆಲಸ ಸಂಬಂಧ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸ್ಥಳಾಂತರವಾಗುವ ಬಡ ಕುಟುಂಬಗಳು ಈ ಯೋಜನೆಯಿಂದ ಹೆಚ್ಚಿನ ಲಾಭ ಪಡೆಯಲಿವೆ ಎಂದು ಅವರು ತಿಳಿಸಿದ್ದಾರೆ.