ಚಂಢೀಗಢ್,ಜೂ.27- ಯುದ್ಧ ವಿಮಾನಕ್ಕೆ ಪಕ್ಷಿಯೊಂದು ಬಡಿದು ಇಂಜಿನ್ ವಿಫಲವಾದ ನಂತರ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದನ್ನು ಭಾರತೀಯ ವಾಯುಪಡೆಯ ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿದೆ.
ಪಂಜಾಬ್ನ ಚಂಢೀಗಢದ ಅಂಬಾಲ ವಾಯುನೆಲೆ ಬಳಿ ಇಂದು ಮುಂಜಾನೆ ಸಂಭವಿಸಿದೆ.
ಎಂದಿನಂತೆ ತರಬೇತಿಗಾಗಿ ಜಾಗ್ವರ್ ಫೈಟರ್ ಜೆಟ್ ಮೇಲೆ ಹಾರಿದ ಕೆಲ ಹೊತ್ತಿನಲ್ಲೇ ಪಕ್ಷಿಯೊಂದು ಅಪ್ಪಳಿಸಿತು. ಇದರಿಂದ ವಿಮಾನದ ಇಂಜಿನ್ ವಿಫಲಗೊಂಡು ತೊಂದರೆಗೀಡಾಯಿತು.
ಪೈಲೆಟ್ ತಕ್ಷಣ ಬುದ್ದಿವಂತಿಕೆಯಿಂದ ವಿಮಾನದ ಇಂಧನವನ್ನು ಕೆಳಗೆ ಚೆಲ್ಲುವ ಮೂಲಕ ಬರಿದು ಮಾಡಿದರು. ಅಲ್ಲದೆ ಫೈಟರ್ಜೆಟ್ ನಲ್ಲಿದ್ದ ಸಣ್ಣ ಬಾಂಬ್ಗಳನ್ನು ಕೆಳಗೆಸೆದು ವಿಮಾನವನ್ನು ಅತ್ಯಂತ ಹಗುರವಾಗಿಸಿ ತಕ್ಷಣ ಅಂಬಾಲ ವಾಯುನೆಲೆಯಲ್ಲಿ ತುರ್ತು ಭೂ ಸ್ಪರ್ಶ ಮಾಡಿಸಿದರು.
ಒಂದು ವೇಳೆ ವಿಮಾನ ಇಂಜಿನ್ ವೈಫಲ್ಯದಿಂದ ಹಾರಾಟ ಮುಂದುವರೆಸಿದ್ದರೆ, ವಿಮಾನ ಪತನಕ್ಕೀಡಾಗಿ ಅದರಲ್ಲಿದ್ದ ದಹನಶೀಲ ಇಂಧನ ಮತ್ತು ಬಾಂಬ್ಗಳಿಗೆ ಬೆಂಕಿ ತಗುಲಿ ಭಾರೀ ಸ್ಪೋಟ ಸಂಭವಿಸಿ ಅಕ್ಕಪಕ್ಕದ ಪ್ರದೇಶಗಳಿಗೂ ಹಾನಿಯಾಗುವ ಸಾಧ್ಯತೆ ಇತ್ತು.
ಪೈಲೆಟ್ನ ಸಮಯ ಪ್ರಜ್ಞೆಯಿಂದ ಫೈಟರ್ಜೆಟ್ ಪತನವಾಗುವುದು ತಪ್ಪಿದಲ್ಲದೆ ಸಂಭವನೀಯ ಅನಾಹುತದಿಂದ ಆ ಸ್ಥಳವೂ ಪಾರಾದ ಬಗ್ಗೆ ಐಎಎಫ್ ಅಧಿಕಾರಿಗಳು ಪೈಲೆಟ್ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






