ಪ್ರಧಾನಿ ಮೋದಿಯವರಿಂದ ಜಪಾನ್ ಪ್ರಧಾನಿ ಸಿನ್‍ಜೋ ಅಬೆ ಭೇಟಿ

ಒಸಾಕಾ, ಜೂ.27- ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‍ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಆ ದೇಶದ ಪ್ರಧಾನಮಂತ್ರಿ ಸಿನ್‍ಜೋಅಬೆ ಅವರನ್ನು ಭೇಟಿ ಮಾಡಿ ಪರಸ್ಪರ ಹಿತಾಸಕ್ತಿಯ ಪೂರಕ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.

ಜಪಾನ್ ಪ್ರಧಾನಿ ಭೇಟಿ ವೇಳೆ ಮೋದಿ ಅವರು ತಮಗೆ ಮತ್ತು ಭಾರತೀಯ ನಿಯೋಗಕ್ಕೆ ಒಸಾಕಾದಲ್ಲಿ ಅದ್ಧೂರಿ ಸ್ವಾಗತಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಅಲ್ಲದೆ, ಜ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಅಬೆ ಮತ್ತು ಜಪಾನ್‍ಗೆ ಮೋದಿ ಅಭಿನಂದಿಸಿದರು.

ಉಭಯ ನಾಯಕರ ನಡುವೆ ಪರಸ್ಪರ ಹಿತಾಸಕ್ತಿಯ ಪೂರಕ ವಿಷಯಗಳು ಚರ್ಚೆಯಾದವು. ವ್ಯಾಪಾರ, ವಾಣಿಜ್ಯ ಕ್ಷೇತ್ರಗಳೂ ಸೇರಿದಂತೆ ವಿವಿಧ ವಿಚಾರಗಳು ಚರ್ಚಿಸಲ್ಪಟ್ಟವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್‍ನಲ್ಲಿ ಜಪಾನ್‍ನ ನೂತನ ಚಕ್ರವರ್ತಿ ನರುಹಿಟೋ ಅವರ ಪಟ್ಟಾಭಿಷೇಕ ಸಮಾರಂಭಕ್ಕೆ ರಾಷ್ಟ್ರಪತಿ ರಾಮನಾಥ್‍ಕೋವಿಂದ್ ಪಾಲ್ಗೊಳ್ಳುವುದಾಗಿ ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.

ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯುವ ವಾರ್ಷಿಕ ಶೃಂಗಸಭೆಗೆ ಜಪಾನ್ ಪ್ರಧಾನಿ ಅವರನ್ನು ಮೋದಿ ಆಮಂತ್ರಿಸಿ ಅವರ ಬರುವಿಕೆಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು ಎಂದು ರವೀಶ್‍ಕುಮಾರ್ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ