ಬೀದರ್: ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ನಂತರ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಬೀದರ್ ಜಿಲ್ಲೆಗೆ ಅಡಿ ಇಟ್ಟಿದೆ. ಬಸವ ಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಗುರುವಾರ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.
ಉಜಳಂಬ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿಯೇ ಜನತಾ ದರ್ಶನ ಮತ್ತು ಗ್ರಾಮ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆಯ ಆವರಣದಲ್ಲಿ ಜನತಾ ದರ್ಶನಕ್ಕೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸುಮಾರು 10 ಸಾವಿರ ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜನತಾ ದರ್ಶನ ಟೆಂಟ್ಗೆ ಹೊಂದಿಕೊಂಡಂತೆ ಇರುವ ಕೋಣೆಯಲ್ಲಿ ಮುಖ್ಯಮಂತ್ರಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಂದ ಜನತೆಗೆ ಶಾಲೆಯ ಸಮೀಪದಲ್ಲಿಯೇ ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ್ ಮತ್ತು ಸ್ಥಳೀಯ ಶಾಸಕ ಬಿ ನಾರಾಯಣರಾವ್ ಬುಧವಾರದಂದು ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು.
ಮುಖ್ಯಮಂತ್ರಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಬಸ್ನಲ್ಲಿ ಗ್ರಾಮಕ್ಕೆ ಆಗಮಿಸುವ ಕುಮಾರಸ್ವಾಮಿಯವರನ್ನು ಚಕ್ಕಡಿ ಮೂಲಕ ಕರೆತರಲಾಗುವುದು. ಕುಂಭ ಹೊತ್ತ ಮಹಿಳೆಯರ ನೇತೃತ್ವದಲ್ಲಿ ಮೆರವಣಿಗೆ ಮಾಡಲಾಗುವುದು. ರಾಜ್ಯದ ತುತ್ತ ತುದಿ ಜಿಲ್ಲೆಯ ಕಟ್ಟ ಕಡೆಯ ಹಳ್ಳಿಯಲ್ಲಿ ಗ್ರಾಮವಾಸ್ತವ್ಯ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಉಜಳಂಬ ಗ್ರಾಮ ವಾಸ್ತವ್ಯದಿಂದಾಗಿ ಬಸವಕಲ್ಯಾಣ ತಾಲ್ಲೂಕಿನ ಜೊತೆ ಬೀದರ್ ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭಗೊಳ್ಳಲಿದೆ ಎಂದು ಸಚಿವ ಬಂಡೆಪ್ಪ ಕಾಶಂಪೂರ ಮತ್ತು ಶಾಸಕ ಬಿ. ನಾರಾಯಣರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಉಜಳಂಬ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಂದೋಬಸ್ತ್ಗಾಗಿ 300 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಂ ವಾಸ್ತವ್ಯ ಮಾಡಲಿರುವ ಶಾಲೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಮುಖ್ಯಮಂತ್ರಿಗಳ ಸ್ವಾಗತಕ್ಕೆ ಉಜಳಂಬ ಜನ ಕಾತರದಿಂದ ಎದುರು ನೋಡುತ್ತಿದ್ದಾರೆ.