![water](http://kannada.vartamitra.com/wp-content/uploads/2019/06/water-1-451x381.jpg)
ಬೆಂಗಳೂರು, ಜೂ.27- ಸರ್ಕಾರ ಜಲ ಸಂರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಪರಾದಾಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೆ ಸಂಶಯವಿಲ್ಲ ಎಂದು ಯುನೈಟೆಡ್ ಬೆಂಗಳೂರು ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಯುನೈಟೆಡ್ ಬೆಂಗಳೂರು ಸಂಘಟನೆ ಪರವಾಗಿ ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಈಗಾಗಲೇ ಚೆನ್ನೈ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ನೀರನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನರು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಕೆರೆಗಳ ನಗರಿ ಎಂಬ ಪ್ರಖ್ಯಾತಿ ಹೊಂದಿದ್ದ ಬೆಂಗಳೂರು ಈಗ ಕಾಂಕ್ರಿಟ್ ಕಾಡು ಎಂಬ ಕುಖ್ಯಾತಿಯ ಕಿರೀಟ ಹೊತ್ತುಕೊಂಡಿದೆ. ನಗರದಲ್ಲಿ ನೀರು ಮಾಯವಾಗುತ್ತಿದೆ. ತ್ವರಿತವಾಗಿ ಆಗಿರುವ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಅತ್ಯಂತ ಅಸಮರ್ಪಕ ನೀರಿನ ನಿರ್ವಹಣೆಯಿಂದಾಗಿ ನೀರಿನ ಕೊಳವೆಗಳೇ ಬರಿದಾಗುತ್ತಿವೆ . ಅಂತರ್ಜಲ ಮಟ್ಟ ಪಾತಾಳದತ್ತ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎನ್.ಲಕ್ಷ್ಮಣ್‍ರಾವ್ ನೇತೃತ್ವದ ತಜ್ಞರ ಸಮಿತಿ , ಕೆರೆಗಳ ಒತ್ತುವರಿ ಕುರಿತು ಕೋಳಿವಾಡ ಸಮಿತಿ , ನ್ಯಾಯಮೂರ್ತಿ ಎನ್.ಕೆ.ಪಾಟಿಲ್ ಸಮಿತಿ ನೀರಿನ ಸಂರಕ್ಷಣೆಯ ಬಗ್ಗೆ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಸಮರ್ಪಕವಾಗಿ ಅಧ್ಯಯನ ನಡೆಸಿ ಮುಂದಿನ ಪೀಳಿಗಾಗಿ ಜಲ ಸಂರಕ್ಷಣೆ ಮಾಡುವ ಕಡೆಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ನೀರಿನ ಸಂರಕ್ಷಣೆಗೆ ಪರಿಹಾರ:
ಮಳೆ ನೀರಿನ ಕೊಯ್ಲು ,ಅಂತರ್ಜಲ ನಿರ್ಬಂಧಗಳನ್ನು ಇನ್ನಷ್ಟು ಬಲಪಡಿಸುವುದು, ಮೇಲ್ವಿಚರಣಾ ಜಲವನ್ನು ಸುಧಾರಣೆಗೊಳಿಸುವುದು, ಮನೆಗಳಲ್ಲಿ ಶೌಚಾಲಯ , ವಾಷ್ ಬೇಸಿನ್, ಶವರ್, ತೋಟಗಾರಿಕೆ, ಕಾರ್ ತೊಳೆಯುವುದು, ಮಾದಲಾದ ಕಡೆಗಳಲ್ಲಿ ಸೋರುವಿಕೆಯನ್ನು ಸರಿಪಡಿಸಬೇಕು. ಕೆರೆಗಳನ್ನು ಸಂರಕ್ಷಿಸಬೇಕು, ಮರಗಿಡಗಳನ್ನು ಉಳಿಸಿ -ಬೆಳೆಸುವ ಕೆಲಸವಾಗಬೇಕು, ಮಳೆ ನೀರನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ನೀರನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದರ ಬಗ್ಗೆ ಸರ್ಕಾರ, ಬಿಬಿಎಂಪಿ, ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.