ನವದೆಹಲಿ, ಜೂ.26-ಕೋಟ್ಯಂತರ ರೂ.ಗಳ ಅಗಸ್ತ್ಯಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಆರೋಪಿಯಾಗಿರುವ ಉದ್ಯಮಿ ರಾಜೀವ್ ಸಕ್ಸೇನಾ ವಿದೇಶಿ ಪ್ರವಾಸಕ್ಕೆ ದೆಹಲಿ ಹೈಕೋರ್ಟ್ ನೀಡಿದ್ದ ಅನುಮತಿಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ.ಆರ್.ಗವಾಯಿ ಅವರನ್ನು ಒಳಗೊಂಡ ಪೀಠವು ಸಕ್ಸೇನಾ ವಿದೇಶಿ ಪ್ರವಾಸಕ್ಕೆ ತೆರಳದಂತೆ ತಡೆ ನೀಡಿದೆ.
ರಕ್ತ ಕ್ಯಾನ್ಸರ್ನಿಂದ ಬಳಲುತ್ತಿರುವ ತಾವು ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಈ ಹಿಂದೆ ರಾಜೀವ್ ಸಕ್ಸೇನಾ ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ನ್ಯಾಯಾಲಯ ಅನುಮತಿ ಸಹ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಇಂದು ಈ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಡಿ ತನಿಖೆಗೆ ಸಹಕಾರ ನೀಡುವ ದೃಷ್ಟಿಯಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಜೂ.25 ರಿಂದ ಜುಲೈ 24ರವರೆಗೆ ಸಂಯುಕ್ತ ಅರಬ್ ಗಣರಾಜ್ಯ, ಇಂಗ್ಲೆಂಡ್ ಮತ್ತು ಅಮೇರಿಕಾಗೆ ತೆರಳಲು ತಮಗೆ ಅನುಮತಿ ನೀಡುವಂತೆ ಸಕ್ಸೇನಾ ಕೋರಿದ್ದರು.
ಈಗ ಸುಪ್ರೀಂಕೋರ್ಟ್ ವಿದೇಶ ಪ್ರವಾಸಕ್ಕೆ ತಡೆಯಾಜ್ಞೆ ನೀಡಿರುವುದರಿಂದ 1600 ಕೋಟಿ ರೂ.ಗಳ ಹೆಲಿಕಾಪ್ಟರ್ ಖರೀದಿ ಹಗರಣದ ತನಿಖೆ ತೀವ್ರಗೊಳ್ಳಲು ಇಡಿಗೆ ಸುಪ್ರೀಂಕೋರ್ಟ್ ಸಹಕಾರ ನೀಡಿದೆ.