ರೈತರು ಮೂರುವರ್ಷಕ್ಕೊಮ್ಮೆ ಜಮೀನಿಗೆ ಸಾವಯುವ ಗೊಬ್ಬರ ಬಳಸಿ-ಸಚಿವ ಸಿ.ಎಸ್.ಮನಗೋಳಿ

ಬೆಂಗಳೂರು, ಜೂ.26- ರೈತರು ಮೂರು ವರ್ಷಕ್ಕೊಮ್ಮೆಯಾದರೂ ತಮ್ಮ ಜಮೀನಿಗೆ ಸಾವಯವ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕೆಂದು ತೋಟಗಾರಿಕಾ ಸಚಿವ ಸಿ.ಎಸ್.ಮನಗೋಳಿ ಸಲಹೆ ನೀಡಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರೈತ ಉತ್ಪಾದಕರ ಸಂಸ್ಥೆಯ ಮುಖ್ಯಸ್ಥರುಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಶೇ.75ರಷ್ಟು ಮಂದಿ ಕೃಷಿ ಮಾಡುತ್ತಾರೆ.ಶೇ.25ರಷ್ಟು ಮಂದಿ ಕೃಷಿಯೇತರರು ಇದ್ದಾರೆ.ವಿದೇಶದಲ್ಲಿ ಶೇ.25ರಷ್ಟು ಮಂದಿ ಕೃಷಿ ಮಾಡುತ್ತಾರೆ. ಶೇ.75ರಷ್ಟು ಕೃಷಿಯೇತರರು ಇದ್ದಾರೆ. ನಮ್ಮಲ್ಲಿ ಅಪಾರ ಪ್ರಮಾಣದಲ್ಲಿ ಕೃಷಿ ಮಾಡುವವರಿದ್ದರೂ ಸಾಕಷ್ಟು ಆಹಾರ ಉತ್ಪಾದನೆಯಾಗುತ್ತಿಲ್ಲ. ವಿದೇಶದಲ್ಲಿ ಕಡಿಮೆ ಕೃಷಿಕರಿದ್ದರೂ ಹೆಚ್ಚು ಆಹಾರ ಉತ್ಪಾದನೆಯಾಗಿ ಸ್ಥಳೀಯ ಬಳಕೆ ನಂತರವೂ ರಫ್ತು ಮಾಡುತ್ತಿದ್ದಾರೆ.

ನಮ್ಮಲ್ಲಿ ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡಬೇಕು, ಕೃಷಿ ಜೊತೆಗೆ ಉಪಕಸುಬುಗಳನ್ನು ರೂಢಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು, ರಸಗೊಬ್ಬರ ಬೆಳೆ ಜೊತೆಗೆ ಮೂರು ವರ್ಷಕ್ಕೊಮ್ಮೆಯಾದರೂ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕೃಷಿ ಇಲಾಖೆ ನಿರ್ದೇಶಕ ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ತೋಟಗಾರಿಕೆ ಇಲಾಖೆಯಿಂದ 99 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿಯೊಂದು ಸಂಸ್ಥೆಗೆ 22.5 ಲಕ್ಷ ರೂ.ನಂತೆ 19 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪ್ರತಿಯೊಂದು ಸಂಸ್ಥೆಯು ತಲಾ 9 ಲಕ್ಷ ಅನುದಾನವನ್ನು ಈವರೆಗೆ ಬಳಸಿಕೊಂಡಿವೆ ಎಂದು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ