ತೆಲುಗು ದೇಶಂ ಪಕ್ಷದ ಪ್ರಜಾವೇದಿಕೆ ಕಟ್ಟಡದ ನೆಲಸಮ

ಅಮಾರವತಿ, ಜೂ.26- ಆಂಧ್ರಪ್ರದೇಶದ ನೂತನ ಸಿಎಂ ಜಗನ್ ಮೋಹನ್‍ರೆಡ್ಡಿ ಅಧಿಕಾರವೇರಿದ ನಂತರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪಕ್ಷದ ಚಟುವಟಿಕೆಗಳಿಗೆ ಕೇಂದ್ರವಾಗಿದ್ದ ಪ್ರಜಾವೇದಿಕೆ ಕಟ್ಟಡವನ್ನು ನೆಲಸಮ ಮಾಡಲಾಗಿದೆ.

ಕಳೆದ ಬುಧವಾರ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ, ಹಲವು ವಿಷಯಗಳ ಚರ್ಚೆ ನಂತರ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಅಧಿಕಾರಾವಧಿಯಲ್ಲಿ ನಿರ್ಮಾಣವಾದ ಪ್ರಜಾವೇದಿಕೆ ಕಟ್ಟಡದ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಕಾನೂನುಬಾಹಿರವಾಗಿ ಹಾಗೂ ನಿರ್ಮಾಣದ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವ ಹಿನ್ನೆಲೆಯಲ್ಲಿ ಕಟ್ಟಡವನ್ನು ನೆಲಸಮ ಮಾಡುವಂತೆ ಜಗನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಸಿಆರ್‍ಡಿಎ ಉನ್ನತ ಅಧಿಕಾರಿಗಳು, ಎಂಜಿನಿಯರ್‍ಗಳ ಸಮಕ್ಷಮದಲ್ಲಿ ಪ್ರಜಾವೇದಿಕೆಯನ್ನು ನೆಲಸಮ ಮಾಡಲಾಗುತ್ತಿದ್ದು, ಕಟ್ಟಡದಲ್ಲಿದ್ದ ಸಾಮಾಗ್ರಿಯನ್ನು ಅಧಿಕಾರಿಗಳು ಸಚಿವಾಲಯಕ್ಕೆ ಸಾಗಿಸಿದ್ದಾರೆ.

ಇತ್ತೀಚೆಗಷ್ಟೇ ಜಗನ್ ಸರ್ಕಾರ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ನೀಡಲಾಗಿದ್ದ ಜೆಡ್ ಪ್ಲಸ್ ಭದ್ರತೆಯನ್ನೂ ವಾಪಾಸ್ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ