ಜೈಪುರ, ಜೂ.26- ಸಲಿಂಗಿಗಳ ಸಂಬಂಧ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಹರಿಯಾಣದಲ್ಲಿ ಮತ್ತೊಂದು ವಿಲಕ್ಷಣ ಘಟನೆ ನಡೆದಿದೆ.
ಮದುವೆ ನಂತರ ಓಡಿ ಹೋಗಿದ್ದ ರಾಜಸ್ತಾನದ ಯುವತಿ 23 ದಿನಗಳ ನಂತರ ತನ್ನ ಸಲಿಂಗಕಾಮಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ವಾಸಿಸುತ್ತಿರುವುದು ಪತ್ತೆಯಾಗಿದ್ದಾರೆ.
ಉತ್ತರಪ್ರದೇಶದ ಶಹಜಾನಪುರದ ನಿವಾಸಿಯೊಬ್ಬರು ಮದುವೆ ನಂತರ ದಿಢೀರ್ ನಾಪತ್ತೆಯಾಗಿದ್ದ ಪತ್ನಿಯ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಹರಿಯಾಣದ ಮನೆಸರ್‍ದಲ್ಲಿ ನವ ವಧುವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಜೂ.1ರಂದು ಪತಿಯನ್ನು ತೊರೆದಿದ್ದ ಯುವತಿ, ರಾಷ್ಟ್ರೀಯ ಆಟಗಾರ್ತಿ ಸಲಿಂಗಕಾಮಿ ಗೆಳತಿಯೊಂದಿಗೆ ವಾಸಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಈ ಇಬ್ಬರು ಸಂಬಂಧದಲ್ಲಿದ್ದರು ಎನ್ನಲಾಗಿದೆ.
ಪೊಲೀಸರು ಸಲಿಂಗಕಾಮಿಗಳಿಬ್ಬರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದು, ನಾವು ವಯಸ್ಕರಾಗಿದ್ದು, ನಮ್ಮ ಇಚ್ಛೆಗೆ ತಕ್ಕಂತೆ ಬದುಕುವ ಹಕ್ಕ ನಮಗಿದೆ ಎಂದು ವಾದಿಸಿದ್ದಾರೆ. ನನಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಪರಾರಿಯಾದ ನವವಧು ಹೇಳಿದ್ದಾರೆ.
ವಿಚಾರಣೆ ಬಳಿಕ ಸಲಿಂಗಿ ಜೋಡಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು , ಪೊಲೀಸ್ ಠಾಣೆ ಮೆಟ್ಟಿಲೇರುತ್ತಿರುವುದು ಸಿಬ್ಬಂದಿಗೆ ಒಂದು ರೀತಿಯಲ್ಲಿ ತಲೆನೋವಾಗಿ ಪರಿಣಮಿಸಿದೆ.