ಬೆಂಗಳೂರು: ದೇಶದಲ್ಲಿ ಅಪಘಾತ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಸಂಚಾರಿ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಅಪಘಾತಕ್ಕೆ ಪ್ರಮುಖ ಕಾರಣ. ಹೀಗಾಗಿ ಸಂಚಾರ ನಿಯಮವನ್ನು ಗಾಳಿಗೆ ತೂರುವವರಿಗೆ ಹೆಚ್ಚಿನ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಮೋಟಾರು ವಾಹನ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮರುಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಕಳೆದ ಬಾರಿ ಈ ವಿಧೇಯಕಕ್ಕೆ ಲೋಕಸಭೆಯಲ್ಲಿ ಅನುಮತಿ ಸಿಕ್ಕಿತ್ತಾದರೂ ರಾಜ್ಯ ಸಭೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಈ ವಿಧೇಯಕಕ್ಕೆ ಇಂದು ಅನುಮತಿ ಸಿಗುವ ಸಾಧ್ಯತೆ ಇದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ವೀಧೆಯಕಕ್ಕೆ ಅನುಮೋದನೆ ದೊರೆತರೆ ಕನಿಷ್ಠ ದಂಡದ ಮೊತ್ತ 1 ಸಾವಿರ ರೂ. ಆಗಿರಲಿದೆ. ಅಲ್ಲದೆ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶ ಇರಲಿದೆ. ಒಂದೊಮ್ಮೆ ಈ ನಿಯಮ ಜಾರಿಗೆ ಬಂದರೆ ವಾಹನ ಸವಾರರಿಗೆ ಭಾರೀ ಹೊರೆ ಆಗಲಿದೆ.
ಈ ವಿಧೇಯಕ ಮಂಡನೆಗೆ ಈ ಮೊದಲು ಎಲ್ಲ ಕಡೆಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈಗ ಮತ್ತೆ ಈ ವಿಧೆಯಕ ಮರು ಮಂಡನೆಗೆ ಸರ್ಕಾರ ಮುಂದಾಗಿರುವುದರಿಂದ ಮತ್ತೆ ಪ್ರತಿಭಟನೆಗಳು ನಡೆಯುವ ಲಕ್ಷಣ ಗೋಚರವಾಗಿದೆ.
ಎಷ್ಟಷ್ಟು ದಂಡ?: ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ 5,000 ರೂ. ದಂಡ. ವೇಗದ ಮಿತಿ ದಾಟಿದರೆ 1000 ರೂ. ದಂಡ. ಅಡ್ಡಾದಿಡ್ಡಿ ಹಾಗೂ ಮೊಬೈಲ್ ಬಳಕೆ ಮಾಡುತ್ತಾ ಬೈಕ್ ಸವಾರಿ ಮಾಡಿದರೆ 1000 ರೂ. ದಂಡ, ಕುಡಿದು ವಾಹನ ಚಲಾಯಿಸಿದರೆ 10,000 ರೂ ದಂಡ ಬೀಳಲಿದೆ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಸಂತ್ರಸ್ತರಿಗೆ 25 ಸಾವಿರ ರೂ. ಬದಲು 2 ಲಕ್ಷ ರೂ.ವರೆಗೆ ಪರಿಹಾರ ನೀಡಬೇಕಾಗುತ್ತದೆ.