ನವದೆಹಲಿ/ರಾವಲ್ಪಿಂಡಿ , ಜೂ.25- ಭಾರತದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಪಾಕಿಸ್ತಾನದ ಜೈಶ್-ಇ-ಮಹಮ್ಮದ್ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ, ಮುಂಬೈ ಮೇಲೆ ನಡೆದ ದಾಳಿಯ ರೂವಾರಿ ಮಸೂದ್ ಅಜರ್ ಬಾಂಬ್ ಸ್ಫೊಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸದ್ಯಕ್ಕೆ ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ಮಸೂದ್ ಅಜರ್ ಹಾಗೂ ಇತರೆ 10 ಮಂದಿ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಪಾಕ್ ಸರ್ಕಾರವಾಗಲಿ, ಇಲ್ಲವೇ ಭಾರತ ಸರ್ಕಾರ ಇದುವರೆಗೂ ಇದನ್ನು ದೃಢಪಡಿಸಿಲ್ಲ. ಟೆಲಿಗ್ರಾಮ್ ಸುದ್ದಿವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಜಾರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ಆತನು ಚಿಕಿತ್ಸೆ ಪಡೆಯುತ್ತಿರುವ ರಾವಲ್ಪಿಂಡಿ ಆಸ್ಪತ್ರೆಗೆ ಭಾರೀ ಬಿಗಿ ಭದ್ರತೆ ಒದಗಿಸಲಾಗಿದ್ದು, ಮಾಧ್ಯಮಗಳಿಗೆ ಸಂಪೂರ್ಣವಾಗಿ ನಿರ್ಬಂಧ ಹಾಕಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಅಜಾರ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗುತ್ತಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ಫೆಬ್ರವರಿ 26ರಂದು ಸಿಆರ್‍ಪಿಎಫ್ ಯೋಧರ ವಾಹನಕ್ಕೆ ಆತ್ಮಾಹುತಿ ದಳದ ಜೀಪ್ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಘಟನೆಗೆ ಜೈಶ್-ಇ-ಮಹಮ್ಮದ್ ಸಂಘಟನೆಯೇ ಕಾರಣ ಎನ್ನಲಾಗಿತ್ತು.
ಇದಕ್ಕೆ ಪ್ರತೀಕಾರವಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಅನೇಕ ಉಗ್ರರನ್ನು ಕೊಂದು ಹಾಕಿತ್ತು. ಬಳಿಕ ಭಾರತ ಜಾಗತಿಕ ಮಟ್ಟದಲ್ಲಿ ಒತ್ತಡ ಹಾಕಿದ ಪರಿಣಾಮ ಪಾಕ್ ಸರ್ಕಾರ ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದಲೇ ಜೈಶ್-ಇ-ಮೊಹಮ್ಮದ್ ಸಂಘಟನೆಯನ್ನು ಜಾಗತಿಕ ಭಯೋತ್ಪಾದನೆ ಸಂಘಟನೆ ಎಂದು ಘೋಷಣೆ ಮಾಡಿತ್ತು.
ಯಾವಾಗ ಜೈಶ್-ಇ-ಮೊಹಮ್ಮದ್ ಜಾಗತಿಕ ಭಯೋತ್ಪಾದನೆ ಸಂಘಟನೆ ಎಂಬುದು ಘೋಷಣೆಯಾಗುತ್ತಿದ್ದಂತೆ ಮೊಹಮ್ಮದ್ ಮಸೂದ್ ಅಜಾರ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆತನಿಗೆ ಐಎಸ್‍ಐ ಭದ್ರತೆ ಒದಗಿಸಲಾಗುತ್ತಿದೆ ಎಂದು ಭಾರತದ ಗುಪ್ತಚರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಈತನನ್ನು ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಬಂಧಿಸಿತ್ತು. ನಂತರ ಉಗ್ರರು ನೇಪಾಳದ ರಾಜಧಾನಿ ಕಟ್ಮಂಡುವಿನಿಂದ ನವದೆಹಲಿಗೆ ಹೊರಟಿದ್ದ ವಿಮಾನವನ್ನು ಅಪಹರಿಸಿದ್ದರು.
ಜೈಲಿನಲ್ಲಿರುವ ಅಜಾರ್‍ನನ್ನು ಬಿಡುಗಡೆ ಮಾಡಿದರೆ ಮಾತ್ರ ವಿಮಾನವನ್ನು ಸುರಕ್ಷಿತವಾಗಿ ಹಿಂತಿರುಗಿಸುತ್ತೇವೆ. ಇಲ್ಲದಿದ್ದರೆ ಇಡೀ ವಿಮಾನವನ್ನೇ ಸ್ಫೋಟಿಸುವ ಬೆದರಿಕೆ ಹಾಕಿದ್ದರು.
ಸುದೀರ್ಘ ಸಂಧಾನ ನಡೆದ ಬಳಿಕ ವಿಮಾನದಲ್ಲಿದ್ದ 150ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ರಕ್ಷಣೆಗಾಗಿ ಅಂದಿನ ಅಟಲ್‍ಬಿಹಾರಿ ವಾಜಪೇಯಿ ಸರ್ಕಾರ ಅನಿವಾರ್ಯವಾಗಿ ಈ ಉಗ್ರನನ್ನು ಆಫ್ಘಾನಿಸ್ತಾನದ ಕಂದಹಾರ್‍ಗೆ ಕರೆದುಕೊಂಡು ಹೋಗಿತ್ತು.
ಅಂದಿನಿಂದ ಈತ ಭಾರತಕ್ಕೆ ಒಂದಲ್ಲೊಂದ ರೀತಿ ಕಂಟಕವಾಗುತ್ತಲೇ ಇದ್ದಾನೆ.