ಬೆಂಗಳೂರು: ಅತೃಪ್ತ ಶಾಸಕರ ಬಂಡಾಯ ಶಮನಕ್ಕೆ ಮೈತ್ರಿ ಸರ್ಕಾರ ಮುಂದಾಗಿದೆ. ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ಹಂಚಿಕೆ ಬಳಿಕ ಉಂಟಾಗಿದ್ದ ಭಿನ್ನಮತ ಸರಿಪಡಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ನ ನಾಯಕರು ಶತಪ್ರಯತ್ನ ಪಡುತ್ತಿದ್ದಾರೆ. ಮೈತ್ರಿ ಸರ್ಕಾರಕ್ಕೆ ಕುತ್ತು ತರಲಿದೆ ಎನ್ನುತ್ತಿದ್ದ ಭಿನ್ನಮತಕ್ಕೆ ಮದ್ದು ನೀಡುವಲ್ಲಿ ರಾಜ್ಯ ನಾಯಕರು ಮೇಲ್ನೋಟಕ್ಕೆ ಸಫಲರಾಗಿರುವಂತೆ ಕಾಣುತ್ತಿದ್ದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.
ಇತ್ತೀಚೆಗಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಶಾಸಕ ಎನ್. ಮಹೇಶ್ ರಾಜೀನಾಮೆಯಿಂದಾಗಿ ತೆರವಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೂ ಸಚಿವರ ನಿಯೋಜನೆಯಾಗಿದೆ. ಸಣ್ಣ ಕೈಗಾರಿಕೆ ಸಚಿವರಾಗಿದ್ದ ಗುಬ್ಬಿ ಶ್ರೀನಿವಾಸ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಉಸ್ತುವಾರಿ ನೀಡಿದ್ದಾರೆ. ಶ್ರೀನಿವಾಸ್ ಬಳಿ ಇದ್ದ ಸಣ್ಣ ಕೈಗಾರಿಕೆಯನ್ನು ಎಚ್.ನಾಗೇಶ್ ಹಾಗೂ ಆರ್.ಶಂಕರ್ಗೆ ಪೌರಾಡಳಿತ ಖಾತೆ ನೀಡಲಾಗಿದೆ. ಸಿಎಂ ಎಚ್.ಡಿ ಕುಮಾರಸ್ವಾಮಿ ಶಿಫಾರಸು ಮೇರೆಗೆ ರಾಜ್ಯಪಾಲ ವಜುಭಾಯಿ ರುದಭಾಯಿ ವಾಲ ಅವರೇ ಖಾತೆಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆಯೇ ಮೈತ್ರಿ ಸರ್ಕಾರದಲ್ಲಿ ಸಂಪುಟ ಪುನರಾಚನೆಯಾಗಿತ್ತು. ರಾಣಿಬೆನ್ನೂರು ಕ್ಷೇತ್ರದ ಕೆಪಿಜೆಪಿ ಶಾಸಕ ಆರ್. ಶಂಕರ್ ಹಾಗೂ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್. ನಾಗೇಶ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗಿತ್ತು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಜ್ಯಪಾಲ ವಿ. ಆರ್ ವಾಲಾ ಶಂಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಸಚಿವ ಆರ್.ಶಂಕರ್, “ಕ್ಷೇತ್ರದ ಜನತೆಗೆ ಹೆಚ್ವಿನ ಕೆಲಸ ಮಾಡಲು ಸರ್ಕಾರ ಶಕ್ತಿ ಕೊಟ್ಟಿದೆ. ಅದರಂತೆ ನಾನು ಕೆಲಸ ಮಾಡುತ್ತೇನೆ. ಒಳ್ಳೆಯ ಖಾತೆ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ. ಅದರಂತೆಯೇ ಯಾವುದೇ ಖಾತೆ ಕೊಟ್ಟರೂ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ” ಎಂದರು.
ಇದೇ ವೇಳೆ ನೂತನ ಸಚಿವ ಆರ್.ಶಂಕರ್ ಪತ್ನಿ ಧನಲಕ್ಷ್ಮೀ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದರು. ಮತ್ತೊಮ್ಮೆ ಸಚಿವರಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಯಾವ ಖಾತೆ ಸಿಕ್ಕಿದರೂ ಅವರು ಜನರ ಸೇವೆ ಮಾಡಲು ಸಿದ್ಧರಿದ್ದಾರೆ ಹಾಗೂ ಉತ್ತಮ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಶಂಕರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಇದೇ ವೇಳೆ ತಮ್ಮ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು (ಕೆಪಿಜೆಪಿ) ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಪತ್ರ ನೀಡಿದರು. ಸಿದ್ದರಾಮಯ್ಯ ಅವರು ಶಂಕರ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.