ನವದೆಹಲಿ , ಜೂ.25- ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಭದ್ರತಾಪಡೆ ಅಧಿಕಾರಿಗಳು ಮತ್ತು ಸೈನಿಕರ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವುದರಿಂದ ಯೋಧರು ಎಚ್ಚರದಿಂದಿರಬೇಕೆಂದು ಸೂಚಿಸಲಾಗಿದೆ.
ಭಾರತೀಯ ಸೇನಾ ಪಡೆಯ ಗುಪ್ತಚರ ವಿಭಾಗದ ನಿರ್ದೇಶಕರು ಸೂಚಿಸಿರುವ ಸಲಹೆಯಂತೆ ಸಾಮಾಜಿಕ ಜಾಲತಾಣದ ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಮತ್ತಿತರಗಳ ಮೂಲಕ ಭಾರತದ ರಕ್ಷಣಾ ಪಡೆಯ ಮಾಹಿತಿಯನ್ನು ಸೈನಿಕರ ಮೂಲಕ ಕದಿಯಲು ಹೊಂಚು ಹಾಕುತ್ತಿರುವುದಾಗಿ ಎಚ್ಚರಿಸಿದೆ.
ಕೆಲವರು ನಕಲಿ ಖಾತೆಗಳನ್ನು ಸೃಷ್ಟಿಸಿ ಇನ್‍ಸ್ಟಾಗ್ರಾಮ್ ಮೂಲಕ ಸುಂದರವಾಗಿರುವ ಹುಡುಗಿಯರ ಚಿತ್ರಗಳನ್ನು ಹರಿಬಿಟ್ಟು ಸೈನಿಕರು ಮತ್ತು ಮುಖ್ಯಸ್ಥರ ಮನಸ್ಸು ಕದಿಯಲು ಮುಂದಾಗಿದ್ದಾರೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಸೈನಿಕರು ಯಾವುದೇ ಕಾರಣಕ್ಕೂ ಭಾರತದ ಸೇನಾಪಡೆಯ ರಹಸ್ಯ ಮಾಹಿತಿಯನ್ನು ಅಪ್ಪಿತಪ್ಪಯೂ ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ.
ಈ ಹಿಂದೆ ಸೇನಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದ ದಿ.ಪವನ್‍ಕುಮಾರ್ ಸಹೋದರಿ ಗುಜ್ಜಲ್ ಸೌಮ್ಯ ಬಾಂಬೆಯ ಐಐಟಿಯಲ್ಲಿ ಪದವೀಧರರಾಗಿದ್ದು, ಸೇನಾಪಡೆಯಲ್ಲಿ ಯಾವ ರೀತಿ ಬೇಹುಗಾರಿಕೆ ನಡೆಯುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
ವಿಶೇಷವಾಗಿ ಭಾರತದ ನೆರೆಹೊರೆಯ ರಾಷ್ಟ್ರಗಳು ನಮ್ಮ ಸೇನಾ ಕಾರ್ಯಾಚರಣೆಯ ರಹಸ್ಯವನ್ನು ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತವೆ.
ಮೊದಲು ಸುಂದರವಾದ ಹುಡುಗಿಯರ ಮೂಲಕವೇ ಬಲೆಗೆ ಬೀಳಿಸಿಕೊಂಡು ಒಂದೊಂದೇ ಮಾಹಿತಿಯನ್ನು ಕಲೆ ಹಾಕುತ್ತಾರೆ. ವಿಶೇಷವಾಗಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಬಗ್ಗೆ ಜಾಗೃತವಾಗಿರಬೇಕೆಂದು ಸಲಹೆ ಮಾಡಲಾಗಿದೆ.
ಕಳೆದ ಜನವರಿಯಲ್ಲಿ ಇದೇ ರೀತಿ ಭಾರತದ ಸೇನಾಪಡೆಯ ರಹಸ್ಯ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪರಿಣಾಮ ಸೋಮ್‍ವೀರ್‍ಸಿಂಗ್ ಎಂಬ ಸೈನಿಕನನ್ನು ಬಂಧಿಸಲಾಗಿತ್ತು.
ಹೀಗಾಗಿ ಎಲ್ಲಾ ಸೈನಿಕರಿಗೆ ಪುನಃ ಹಿರಿಯ ಸೇನಾಧಿಕಾರಿಗಳು ಎಚ್ಚರದಿಂದಿರುವಂತೆ ಸಲಹೆ ನೀಡಿದ್ದಾರೆ.