
ಬೆಂಗಳೂರು, ಜೂ.25-ವರುಣಾ ಕ್ಷೇತ್ರದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ. ಪಕ್ಷ ಸಂಘಟನೆ ದೃಷ್ಟಿಯಿಂದಾಗಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಪುತ್ರ ಡಾ.ಯತೀಂದ್ರ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು. ಇದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗಿತ್ತು.
ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಿದ್ದಾರೆ. ಇಲ್ಲವಾದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸೋಲುವ ಆತಂಕ ಇದೆ. ಅದನ್ನು ನಿಭಾಯಿಸಲು ಈಗಿನಿಂದಲೇ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಸಿದ್ದರಾಮಯ್ಯ, ನನಗೆ ವರುಣ ಕ್ಷೇತ್ರದ ಬಗ್ಗೆ ಚಿಂತೆ ಇಲ್ಲ. ಕಾಂಗ್ರೆಸ್ ಪಕ್ಷದ ಬಲವರ್ಧನೆ ಅಭಿಯಾನ ವರುಣ ಕ್ಷೇತ್ರಕ್ಕಷ್ಟೇ ಸೀಮಿತವೂ ಅಲ್ಲ. ಲೋಕಸಭೆ ಚುನಾವಣೆ ಸೋಲಿನ ಬಳಿಕ ಇಡೀ ರಾಜ್ಯದಲ್ಲಿ ನಮ್ಮ ಪಕ್ಷದ ಮುಖಂಡರಿಂದ ಸೋಲಿನ ಪರಾಮರ್ಶೆ ನಡೆಯುತ್ತಿದೆ.
ಅದೇ ರೀತಿ ನಾನು ಕೂಡ ವರುಣ ಕ್ಷೇತ್ರದಲ್ಲಿ ಪರಾಮರ್ಶೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದು ಹೇಳಿದರು.