ಬೆಂಗಳೂರು, ಜೂ.25- ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆ ಮತ್ತು ದೇಶದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ ಪರಿಣಾಮವೇ ಜನರು ಕಾಂಗ್ರೆಸ್ ಮುಕ್ತ ಭಾರತ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಂವಿಧಾನದ 352ರ ವಿಧಿಯನ್ನು ದುರುಪಯೋಗಪಡಿಸಿಕೊಂಡು ಇಂದಿರಾಗಾಂಧಿ ಅವರು ದೇಶದೆಲ್ಲೆಡೆ ತುರ್ತು ಪರಿಸ್ಥಿತಿ ಹೇರಿದರು.ಇದರ ಪರಿಣಾಮವೇ ಕಾಂಗ್ರೆಸ್ ಎರಡು ಲೋಕಸಭೆ ಚುನಾವಣೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ 1975ರ ತುರ್ತು ಪರಿಸ್ಥಿತಿ ಒಂದು ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶವನ್ನು ಸುದೀರ್ಘ ದಿನಗಳವರೆಗೆ ಆಳಿದ ಕಾಂಗ್ರೆಸ್ಗೆ ಇಂದು ಅಸ್ತಿತ್ವದ ಭೀತಿ ಎದುರಾಗಿದೆ.ಆ ಪಕ್ಷದಲ್ಲಿ ಇದ್ದರೆ ನಮಗೆ ಭವಿಷ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ ಜಯಪ್ರಕಾಶ್ ನಾರಾಯಣ್ ಅವರನ್ನು ಜೈಲಿನಲ್ಲಿ ಜೀವಂತವಾಗಿಟ್ಟು ಸಾಯಿಸಿದ್ದೇ ಕಾಂಗ್ರೆಸಿಗರು ಎಂದರು.
ಅಂದು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ ಅಟಲ್ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ , ಮಧುದಂಡವತೆ, ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರಿಗೆ ಮಾನಸಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದರು.
ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದವರಿಗೆ ಇಂದಿರಾಗಾಂಧಿಯವರ ಕೈಗೊಂಬೆಯಂತಿದ್ದ ಪೊಲೀಸ್ ಅಧಿಕಾರಿಗಳು ನಂತರ ಕೊಡಬಾರದ ಹಿಂಸೆಗಳನ್ನು ಕೊಟ್ಟರು. ಅಂದು ತುರ್ತುಪರಿಸ್ಥಿತಿ ವಿರುದ್ಧದ ಹೋರಾಟ ಯಶಸ್ವಿಯಾಗಿದ್ದರೆ ಅದಕ್ಕೆ ಆರ್ಎಸ್ಎಸ್ ಸ್ವಾರ್ಥ ರಹಿತದ ಹೋರಾಟವೇ ಕಾರಣ ಎಂದು ಹೇಳಿದರು.
ಅನೇಕ ಜನರು ಜೀವದ ಹಂಗು ತೊರೆದು ಹೋರಾಟ ಮಾಡಿದರು.ದೇಶಕ್ಕೆ ಸ್ವತಂತ್ರ ಬೇಕು ಎಂಬುದು ಎಲ್ಲರ ಇಚ್ಚೆಯಾಗಿತ್ತು.ಇದಕ್ಕಾಗಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ ಎಂದರು.
ಸ್ವತಂತ್ರ ಚಳವಳಿ ಹೋರಾಟಗಾರರಿಗೆ ಸರ್ಕಾರದ ವತಿಯಿಂದ ನೀಡುವ ಮಾದರಿಯಲ್ಲೇ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದವರಿಗೂ ಮಾಸಾಶನ, ಪಿಂಚಣಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವುದಾಗಿ ಯಡಿಯೂರಪ್ಪ ಭರವಸೆ ಕೊಟ್ಟರು.
ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ವತಂತ್ರ ಹೋರಾಟದಲ್ಲಿ ಆರ್ಎಸ್ಎಸ್ ನಾಯಕರ ಕೊಡುಗೆ ಏನು ಎಂದು ಕುಹುಕವಾಡುತ್ತಾರೆ. ಹಾಗಾದರೆ ತುರ್ತು ಪರಿಸ್ಥಿತಿ ಹೋರಾಟದಲ್ಲಿ ನಿಮ್ಮ ಪಾತ್ರ ಏನು ಎಂದು ಪ್ರಶ್ನಿಸಿದರು.
ಎರಡು ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಕಾಂಗ್ರೆಸ್ ನಾಯಕರಿಗೆ ಬುದ್ದಿ ಬಂದಿಲ್ಲ. ಕಡೆ ಪಕ್ಷ ದೇಶದ ಜನತೆ ನಮ್ಮನ್ನು ಏಕೆ ತಿರಸ್ಕಾರ ಮಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವಷ್ಟೂ ಸಹನೆಯೂ ಇಲ್ಲ. ಮುಂದಿನ ದಿನಗಳಲ್ಲಿ ನಿಮಗಾಗಲಿ, ಕಾಂಗ್ರೆಸ್ಗಾಗಲಿ ಭವಿಷ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ತುರ್ತು ಪರಿಸ್ಥಿತಿ ವಿರುದ್ಧ ನಾವು ಹೋರಾಟ ಮಾಡಲು ಆರ್ಎಸ್ಎಸ್ ಪ್ರೇರಣೆ. ನಮಗೆ ಸಂವಿಧಾನ ಬಗ್ಗೆಯಾಗಲಿ ಅಥವಾ ಅಂಬೇಡ್ಕರ್ ಅವರ ಮೇಲಿನ ಪ್ರೀತಿಯಿಂದ ಹೋರಾಟಕ್ಕೆ ಧುಮಕಲಿಲ್ಲ. ಆರ್ಎಸ್ಎಸ್ನ ತ್ಯಾಗ, ಸ್ವಾಭಿಮಾನ, ದೇಶದ ಮೇಲಿದ್ದ ಪ್ರೀತಿಯೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಲೋಕತಾಂತ್ರಿಕ ಆ್ಯಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ ಮಂಜುನಾಥ್ ಸ್ವಾಮಿ, ಪ್ರಧಾನಕಾರ್ಯದರ್ಶಿ ಛಾಯಾಪತಿ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಮಹಿಳಾ ಮೋರ್ಚ ರಾಜ್ಯಾಧ್ಯಕ್ಷ ಭಾರತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.