ಬೆಂಗಳೂರು: ಸಂಪುಟ ವಿಸ್ತರಣೆ ನಡೆದು ಖಾತೆ ಹಂಚಿಕೆ ಮುಗಿದು ಹೋಗಿದೆ. ಆದರೆ ದೋಸ್ತಿಗಳ ನಡುವೆ ಖಾತೆಯ ಗೊಂದಲ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಈ ಮೂಲಕ ಸಿಎಂ ಅವರು ಮೈತ್ರಿ ಮಾತುಕತೆಯಂತೆ ಖಾತೆ ನೀಡೋಕೆ ಹಿಂದೇಟು ಹಾಕಿದ್ರಾ ಅನ್ನೋ ಅನುಮಾನ ಮೂಡಿದೆ.
ಹೌದು. ಸ್ವತಃ ಕಾಂಗ್ರೆಸ್ ಹೈ ಕಮಾಂಡ್ ಆರ್.ಬಿ.ತಿಮ್ಮಾಪುರ್ ಅವರಿಗೆ ಖಾತೆ ಹಂಚಿಕೆ ಗ್ರೀನ್ ಸಿಗ್ನಲ್ ನೀಡಿದರು. ಹೀಗಾಗಿ ಪಕ್ಷದ ವತಿಯಿಂದ ಸಕ್ಕರೆ ಹಾಗೂ ಒಳನಾಡು ಮತ್ತು ಬಂದರು ಖಾತೆಯನ್ನ ಆರ್.ಬಿ ತಿಮ್ಮಾಪುರ್ ಅವರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಆರ್.ಬಿ ತಿಮ್ಮಾಪುರ್ ಬಳಿ ಕೇವಲ ಸಕ್ಕರೆ ಖಾತೆ ಮಾತ್ರ ಇದೆ.
ಬಂದರು ಮತ್ತು ಒಳನಾಡು ಖಾತೆಯನ್ನ ಇನ್ನೂ ಸಿಎಂ ಅವರು ತಿಮ್ಮಾಪುರ್ ಅವರಿಗೆ ಹಂಚಿಕೆ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬುದು ಮಾತ್ರ ಕೈ ಪಾಳಯದ ನಾಯಕರಿಗೆ ಇನ್ನೂ ಗೊತ್ತಿಲ್ಲ. ಸ್ವತಃ ಮಾಜಿ ಸಿಎಂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಖಾತೆ ಕೊಡಿಸಲು ಯತ್ನಿಸಿ ಸೋತಿದ್ದಾರೆ ಎನ್ನಲಾಗಿದೆ.
ಹೆಸರಿಗೆ ಎರಡು ಖಾತೆಯ ಸಚಿವರಾದರೂ ಒಂದು ಖಾತೆ ಅಧಿಕೃತವಾಗಿ ಸಚಿವರ ಕೈಯಲ್ಲೇ ಇಲ್ಲ. ತಿಮ್ಮಾಪುರ್ ಅವರ ಕೈಯಲ್ಲಿ ಸಕ್ಕರೆ ಖಾತೆಯ ಸಿಹಿ ಇದ್ದರೂ, ಪಕ್ಷವೇ ಕೊಡ ಮಾಡಿದ ಬಂದರು ಮತ್ತು ಒಳನಾಡು ಖಾತೆಯ ಸಿಹಿ ಮಾತ್ರ ಇದೂವರೆಗೆ ಸಿಕ್ಕಿಲ್ಲ. ಒಟ್ಟಾರೆ ದೋಸ್ತಿಗಳ ನಡುವೆ ಖಾತೆಯ ಟೆನ್ಷನ್ ಮಾತ್ರ ಇನ್ನು ತಣ್ಣಗಾಗಿಲ್ಲ ಅನ್ನೋದಂತು ಸತ್ಯವಾಗಿದೆ.