ಅಂಟಿಗುವಾ/ನವದೆಹಲಿ, ಜೂ.25- ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,400 ಕೋಟಿ ರೂ. ವಂಚಿಸಿ ಕೆರೇಬಿಯನ್ ದ್ವೀಪರಾಷ್ಟ್ರದಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಮತ್ತು ಕಳಂಕಿತ ವಜ್ರೋದ್ಯಮಿ ಮೆಹಲ್ ಚೊಕ್ಸಿ ಭಾರತ ಹಸ್ತಾಂತರ ಕಾಲ ಸನ್ನಿಹಿತವಾಗಿದೆ.
ಅಂಟಿಗುವಾ ಪ್ರಧಾನಮಂತ್ರಿ ಗಷ್ಟೋನ್ ಬ್ರೌನೆ, ಮೆಹಲ್ ಚೊಕ್ಸಿಯ ಕೆರಿಬಿಯನ್ ದ್ವೀಪರಾಷ್ಟ್ರದ ಪೌರತ್ವ ರದ್ದುಗೊಳಿಸಲಾಗುವುದು. ನಂತರ ಭಾರತಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದರೊಂದಿಗೆ ಚೊಕ್ಸಿ ಸದ್ಯದಲ್ಲೇ ಭಾರತದ ವಶಕ್ಕೆ ಒಳಪಡಲಿದ್ದಾನೆ.
ನಾವು ಆರ್ಥಿಕ ಅಪರಾಧಿಗಳು ಮತ್ತು ಕ್ರಿಮಿನಲ್ಗಳಿಗೆ ರಕ್ಷಣೆ ನೀಡುವ ಪ್ರಶ್ನೆಯೇ ಇಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಮೆಹಲ್ ಚೊಕ್ಸಿ ವಿರುದ್ಧ ಗಂಭೀರ ಆರ್ಥಿಕ ಅಪರಾಧ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಹೀಗಾಗಿ ಆತನ ಅಂಟಿಗುವಾ ಪೌರತ್ವ ರದ್ದುಗೊಳಿಸಲಾಗುತ್ತದೆ ನಂತರ ಭಾರತದ ವಶಕ್ಕೆ ಒಪ್ಪಿಸಲಾಗುತ್ತದೆ ಎಂದು ಪ್ರಧಾನಿ ಹೇಳಿರುವುದಾಗಿ ಅಂಟಿಗುವಾ ಮಾಧ್ಯಮಗಳು ವರದಿ ಮಾಡಿವೆ.
ಮೆಹಲ್ ಚೊಕ್ಸಿಯ ಆಪ್ತ ಸಂಬಂಧಿ ಮತ್ತು ವಜ್ರೋದ್ಯಮಿ ನೀರವ್ ಮೋದಿ ಈಗಾಗಲೇ ಲಂಡನ್ ಜೈಲಿನಲ್ಲಿದ್ದು, ಆತನ ಹಸ್ತಾಂತರ ಕಾಲವೂ ಸನ್ನಿಹಿತವಾಗಿದೆ.






