ಡೆಹ್ರಾಡೂನ್, ಜೂ.24- ಈ ವರ್ಷದ ಚಾರ್‍ಧಾಮ್(ನಾಲ್ಕು ಪವಿತ್ರಧಾಮಗಳ) ಯಾತ್ರೆ ಆರಂಭವಾಗಿ 45 ದಿನಗಳಲ್ಲಿ ಉತ್ತರಾಖಂಡದ ಕೇದಾರನಾಥ ಮಂದಿರಕ್ಕೆ ದಾಖಲೆ ಸಂಖ್ಯೆಯ 7 ಲಕ್ಷ ಯಾತ್ರಿಕರು ಭೇಟಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೇದಾರನಾಥನ ಸನ್ನಿಧಿಗೆ ಭೇಟಿ ನೀಡಿದ ನಂತರ ಈ ಪುಣ್ಯಧಾಮಕ್ಕೆ ತೆರಳುತ್ತಿರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.
ಈ ಸಂಖ್ಯೆ ಇತಿಹಾಸದಲ್ಲೇ ಅತ್ಯಧಿಕವಾಗಿದೆ. 2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು.
2018ರ ಆರು ತಿಂಗಳ ಯಾತ್ರಾ ಅಧಿವಯಲ್ಲಿ 7.32 ಲಕ್ಷ ಯಾತ್ರಿಕರು ಕೇದಾರನಾಥನ ದರ್ಶನ ಪಡೆದಿದ್ದರು. ಆದರೆ ಈ ವರ್ಷ ಮೊದಲ 45 ದಿನಗಳಲ್ಲೇ ಯಾತ್ರಿಕರ ಸಂಖ್ಯೆ 7.35 ಲಕ್ಷ ದಾಟಿದೆ.
ಕೆಲವು ಬಾರಿ ಒಂದೇ ದಿನ 36,000ಕ್ಕೂ ಅಕ ಯಾತ್ರಿಕರು ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇದೂ ಸಹ ಒಂದು ದಾಖಲೆಯೇ ಆಗಿದೆ. ಜೂ. 7ರಂದು 36,179 ಮಂದಿ ಭಕ್ತರು ಕೇದಾರನಾಥ ಮಂದಿರವನ್ನು ಸಂದರ್ಶಿಸಿದ್ದರು. ಬಳಿಕ ಜೂ. 10ರಂದು 36,021 ಮಂದಿ ದೇಗುಲಕ್ಕೆ ಆಗಮಿಸಿದ್ದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಆಗಮಿಸುವಂತೆ ಮಾಡಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ.
ಆಗಾಗ್ಗೆ ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದು, ಇತ್ತೀಚೆಗೆ ಲೋಕಸಭೆ ಚುನಾವಣೆಯ ಕೊನೆಯ ಹಂತದ ವೇಳೆ ಅವರು ಕೇದಾರನಾಥದ ಗುಹೆಯಲ್ಲಿ ಒಂದು ದಿನ ಪೂರ್ತಿ ಧ್ಯಾನ ಮಗ್ನರಾಗಿದ್ದುದು ಇಡೀ ಜಗತ್ತಿನ ಗಮನ ಸೆಳೆದಿತ್ತು. ಮೋದಿ ಅವರಿಂದ ಪ್ರೇರಣೆ ಪಡೆದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇನ್ನೂ ಐದು ತಿಂಗಳ ಕಾಲ ಯಾತ್ರಾ ಅಧಿವಯಿದೆ. ಅಕ್ಟೋಬರ್ ಹೊತ್ತಿಗೆ ಯಾತ್ರೆ ಅಂತ್ಯಗೊಳ್ಳುವ ವೇಳೆಗೆ 15 ಲಕ್ಷಕ್ಕೂ ಅಧಿಕ ಯಾತ್ರಿಕರು ಕೇದಾರನಾಥ ಮಂದಿರವನ್ನು ಸಂದರ್ಶಿಸುವ ನಿರೀಕ್ಷೆಯಿದೆ ಎಂದು ಬದರಿ ಕೇದಾರನಾಥ ಮಂದಿ ಸಮಿತಿ ಸಿಇಒ ಬಿ.ಡಿ ಸಿಂಗ್ ಹೇಳುತ್ತಾರೆ.